ಇಂಡಿ: ಮುಂಬರುವ 2 ವರ್ಷಗಳಲ್ಲಿ ಕ್ಷೇತ್ರದ ಮುಖ್ಯ ರಸ್ತೆಗಳ ಸುಧಾರಣೆ ಹಾಗೂ ವಿಜಯಪುರ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.
ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಔರಾದ- ಸದಾಶಿವಗಡ ರಾಜ್ಯ ಹೆದ್ದಾರಿ 34-ರ 253 ಕಿ.ಮೀ.ದಿಂದ 258 ಹಾಗೂ 262 ಕಿ.ಮೀ.ದಿಂದ 269 ಮತ್ತು 272 ಕಿ.ಮೀ.ದಿಂದ 277 ರವೆಗೆ 27.5 ಕೋಟಿ ರೂ. ಅನುದಾನದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜಲಧಾರೆ ಯೋಜನೆಯಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ವಿಜಯಪುರ, ಇಂಡಿ ಮತ್ತು ಬಸವನಬಾಗೇವಾಡಿ ತಾಲೂಕುಗಳ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಾಗುವುದು. ಈಗಾಗಲೇ ಈ ಯೋಜನೆಯ ಕೆಲಸ ಭರದಿಂದ ಸಾಗಿದೆ. ಸಿಂದಗಿ ಮತ್ತು ಮುದ್ದೇಬಿಹಾಳ ತಾಲೂಕುಗಳ ಎಲ್ಲ ಗ್ರಾಮಗಳಿಗೆ ನಾರಾಯಣಪುರ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುವುದು. ಈ ಎಲ್ಲ ಕೆಲಸಗಳು ಬರುವ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ. ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ವಿದ್ಯುತ್ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಬರುವ 2 ವರ್ಷಗಳಲ್ಲಿ ದಿನದ 24 ಗಂಟೆ ವಿದ್ಯುತ್ ನೀಡಲು ಸಂಕಲ್ಪ ಮಾಡಲಾಗಿದೆ ಎಂದರು.
ಮುಂಬರುವ ಜನವರಿ 26 ರಂದು ಇಂಡಿ-ಆಲಮೇಲ ಹೊಸ ರಸ್ತೆಯನ್ನು ಉದ್ಘಾಟಿಸುತ್ತೇವೆ. ಇಂಡಿ ತಾಲೂಕಿಗೆ ಅನುಕೂಲವಾಗಲಿರುವ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಸರ್ಕಾರ 2800 ಕೋಟಿ ರೂ. ಅನುದಾನ ತೆಗೆದಿರಿಸಿದೆ. ಈ ಯೋಜನೆ ಪೂರ್ಣಗೊಂಡರೆ ಇಂಡಿ ಮತ್ತು ಚಡಚಣ ತಾಲೂಕುಗಳ ಬಹುತೇಕ ಕೃಷಿ ಕ್ಷೇತ್ರ ನೀರಾವರಿಗೆ ಒಳಪಡಲಿದೆ. ತಾಲೂಕಿನಲ್ಲಿರುವ 18 ಕೆರೆಗಳನ್ನು ಸದಾ ತುಂಬಿಸುವ ವ್ಯವಸ್ಥೆ ಮಾಡಿದ್ದೇನೆ. ಪ್ರಸಕ್ತ ಸಾಲಿನಲ್ಲಿ ನನಗೆ ನೀಡಿದ 25 ಕೋಟಿ ರೂ. ಅನುದಾನದಲ್ಲಿ ಸಾಲೋಟಗಿ ಗ್ರಾಮದ ಶಿವಯೋಗೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ 1 ಕೋಟಿ ರೂ. ಅನುದಾನ ನೀಡಲಾಗಿದೆ. ಇನ್ನುಳಿದ ಅನುದಾನದಲ್ಲಿ ಕೆಲವು ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ನ್ಯಾಯವಾದಿ ಬಿ.ಜಿ.ಬಿರಾದಾರ ಮಾತನಾಡಿದರು. ಸೋಮಯ್ಯ ಹಿರೇಪಟ್ಟ, ಜೀತಪ್ಪ ಕಲ್ಯಾಣಿ, ಶಿವಯೋಗೆಪ್ಪ ಚನಗೊಂಡ, ಶಿವಯೋಗಿ ಜ್ಯೋತಗೊಂಡೆ, ಬಾಬುಸಾಹುಕಾರ ಮೇತ್ರಿ, ಜಾವೀದ ಮೋಮಿನ, ಲಿಂಬಾಜಿ ರಾಠೋಡ, ಮಲ್ಲುಗೌಡ ಪಾಟೀಲ, ಇಲಿಯಾಸ್ ಬೋರಾಮಣಿ, ಎಸ್.ಎಸ್.ಕಣಮುಚನಾಳ, ದಯಾನಂದ ಮಠ ಇತರರಿದ್ದರು.