ಜಿಲ್ಲೆ

ಮೂಲಸೌಕರ್ಯ ಒದಗಿಸಲು ಆದ್ಯತೆ

ಬಸವರಾಜ ವೀರಪ್ಪ ಗರಗ

ಶಿರಸಿ: ಉತ್ತಮ ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಮೂಲಸೌಕರ್ಯಗಳನ್ನು ಒದಗಿಸಲು ಶ್ರಮಿಸಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ಗೆ ಸೋಮವಾರ ಭೇಟಿ ನೀಡಿ ಕುಂದುಕೊರತೆ ಪರಿಶೀಲಿಸಿ ಬಳಿಕ ಅವರು ಮಾತನಾಡಿದರು. ಮತಕ್ಷೇತ್ರದ ಎಲ್ಲ ಶಾಲೆ, ಕಾಲೇಜ್‌ಗಳಿಗೆ ಭೇಟಿ ನೀಡಿ ಅಲ್ಲಿನ ಮಾಹಿತಿ ಪಡೆಯುವುದರೊಂದಿಗೆ ಆಯಾ ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ಪೂರಕವಾಗಿ ಸಮಿತಿ ಪುನರ್ ರಚಿಸಲು ಕ್ರಮವಹಿಸಲಾಗುವುದು ಎಂದರು.
ಇದಕ್ಕೂ ಮುನ್ನ ತರಗತಿಗಳಿಗೆ ತೆರಳಿ ಪರಿಶೀಲಿಸಿದ ಅವರು, ಕಾಲೇಜಿನಲ್ಲಿ ಸ್ವಚ್ಛತೆ ಕಾಪಾಡಬೇಕು. ವಿದ್ಯಾರ್ಥಿಗಳು ನೆಪ ಹೇಳಿ ತರಗತಿಗಳಿಂದ ಹೊರಗಿರದೆ ನಿರಂತರವಾಗಿ ಹಾಜರಾಗಬೇಕು ಎಂದರು.
ಪ್ರಾಚಾರ್ಯೆ ದಾಕ್ಷಾಯಿಣಿ ಹೆಗಡೆ ಅವರು, ಕಾಲೇಜ್ ಸಿಬ್ಬಂದಿಗೆ ಶೌಚಗೃಹದ ಸಮಸ್ಯೆ ಇದೆ. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಬರಲು ಬಸ್ ಕೊರತೆಯಿದೆ ಎಂಬುದನ್ನು ಶಾಸಕರ ಗಮನಕ್ಕೆ ತಂದರು. ಸಿದ್ದಾಪುರ, ದಾಸನಕೊಪ್ಪ, ಮುಂಡಗೋಡ ಭಾಗದ ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ದೀಪಕ ದೊಡ್ಡೂರು, ಗಣೇಶ ದಾವಣಗೆರೆ, ಅಬ್ಬಾಸ್ ತೋನ್ಸೆ, ಜಗದೀಶ ಗೌಡ, ಪ್ರದೀಪ ಶೆಟ್ಟಿ ಇತರರಿದ್ದರು.