ಚನ್ನಮ್ಮನ ಕಿತ್ತೂರು: ಶಾಸಕನಿಗಿಂತ ಮೊದಲು ನಾನು ರೈತ, ನಾನು ಎಂದಿಗೂ ರೈತರ ಪರವಾಗಿದ್ದೇನೆ. ಈಗಾಗಲೇ ಕಷಿ ಸಚಿವ ಚೆಲುವರಾಯಸ್ವಾಮಿ, ಸಿಎಂ ಜತೆ ಮಾತನಾಡಿ, ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಮನವಿ ಮಾಡಿದ್ದೇನೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ, ಕಿತ್ತೂರು ಪಟ್ಟಣದಲ್ಲಿ ವಿವಿಧ ರೈತ ಸಂಘಟನೆಗಳು ನಡೆಸಿದ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು. ಇದು ರೈತರ ಹಕ್ಕು. ಹೀಗಾಗಿ, ರೈತರ ಬೇಡಿಕೆ ಈಡೇರುವರೆಗೂ ನಾನು ರೈತರ ಜತೆಯಲ್ಲಿ ಇರುತ್ತೇನೆ. ಈ ಭಾಗದ ಮಲಪ್ರಭಾ ಕಾರ್ಖಾನೆ ಉಳಿಸುವ ಸಲುವಾಗಿ ನಾನು ಈ ಬಾರಿ ಚುನಾವಣೆಯಲ್ಲಿ ಭಾಗವಹಿಸಿದ್ದೇನೆ ಹೊರತು ಬೇರೆ ಯಾವುದೇ ಆಸೆಯಿಂದಲ್ಲ. ಈ ಭಾಗದ ರೈತರಿಗೆ ಅನುಕೂಲವಾಗಲಿ, ಐತಿಹಾಸಿಕ ಕಾರ್ಖಾನೆ ಮುಚ್ಚಿ ಹೋಗಬಾರದು ಎಂಬುದು ನನ್ನ ಆಶಯವಾಗಿದೆ ಎಂದರು.
ರೈತನಾಯಕ ಬಿಷ್ಟಪ್ಪ ಶಿಂಧೆ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರು ಬೇರೆ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದ ಪ್ರಮುಖ ರಾಜಕೀಯ ನಾಯಕರೇ ಆಗಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ಜನಪ್ರತಿನಿಧಿಗಳು ತಮ್ಮ ಪಕ್ಷದಲ್ಲಿರುವ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ನ್ಯಾಯಯುತ ಬೆಲೆ ನಿಗದಿ ಮಾಡಲು ಯಾಕೆ ಹೇಳುತ್ತಿಲ್ಲ, ಕೇವಲ ಪ್ರಚಾರಕ್ಕೆ ಮಾತ್ರ ಪ್ರತಿಭಟನೆಯಲ್ಲಿ ಭಾಗವಹಿಸುವ ಅಗತ್ಯ ಇಲ್ಲ. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಯಾಗುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದರು.
ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ರೈತ ಮುಖಂಡರಾದ ಪ್ರಕಾಶ ನಾಯ್ಕ, ಮಡಿವಾಳಪ್ಪ ವರಗನ್ನವರ, ವಿಜಯಕುಮಾರ ಶಿಂಧೆೆ, ಪ್ರವೀಣ ಸರದಾರ, ಸತೀಶ ಲಂಗೋಟಿ, ಪಾಪು ನರಗುಂದ, ಕಲ್ಲಪ್ಪ ಬುಡರಕಟ್ಟಿ, ಮಂಜುನಾಥ ಸರದಾರ, ಜಗದೀಶ ತೆಗೂರ, ಪ್ರಶಾಂತ ಆದಮನಿ, ಶಂಕರ ಆಯಟ್ಟಿ, ಅಪ್ಪೇಶ ದಳವಾಯಿ, ಮಡಿವಾಳಪ್ಪ ವರಗನ್ನವರ, ಕಲ್ಲಪ್ಪ ಅವರಾದಿ, ದ್ಯಾಮಪ್ಪ ಪಾಗಾದ ಸೇರಿದಂತೆ ವಿವಿಧ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.