ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹಳೇಊರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ದಾನಿಗಳಾದ ಮುರುಳಿಧರ್​ ಮತ್ತು ಮಂಜುನಾಥ್​ ಅವರು ವಿದ್ಯಾರ್ಥಿಗಳಿಗೆ ಶಾಲಾಬ್ಯಾಗ್​ ವಿತರಿಸಿದರು. ದಾನಿಗಳಾದ ಶ್ರೀರಾಮ್​ ಅಸೋಸಿಯೆಟ್ಸ್​ನ ಎಸ್​. ಮುರುಳೀಧರ್​, ಎಸ್​.ಮಂಜುನಾಥ್​, ಚಂದ್ರಪ್ಪ ಇದ್ದರು. 
ಜಿಲ್ಲೆ

ಸರ್ಕಾರಿ ಶಾಲೆಗಳಲ್ಲಿ ಮೌಲ್ಯಧಾರಿತ ಶಿಕ್ಷಣಕ್ಕೆ ಆದ್ಯತೆ

ನಂದಗುಡಿ : ಸರ್ಕಾರ ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ, ಮೌಲ್ಯಧಾರಿತ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದೆ ಎಂದು ಎಪಿಎಂಸಿ ಮಾಜಿ ನಿರ್ದೇಶಕ ಶ್ರೀರಾಮಪ್ಪ ಹೇಳಿದರು.

ಹೋಬಳಿಯ ಹಳೇಊರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ದಾನಿಗಳಾದ ಮುರುಳಿಧರ್​ ಮತ್ತು ಮಂಜುನಾಥ್​ ಅವರಿಂದ ವಿದ್ಯಾರ್ಥಿಗಳಿಗೆ ವಾಟರ್​ ಫಿಲ್ಟರ್​, ಸಮವಸ್ತ್ರ, ನೋಟ್​ ಪುಸ್ತಕ ಶಾಲಾಬ್ಯಾಗ್​ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ನುರಿತ ತಜ್ಞ ಶಿಕ್ಷಕರ ವೃಂದವಿದ್ದು, ಉತ್ತಮ ಶಿಕ್ಷಣ ಪಡೆಯಲು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಸುಶಿಕ್ಷಿತರನ್ನಾಗಿ ಮಾಡಬೇಕು ಎಂದರು. ಗ್ರಾಮೀಣ ಭಾಗದ ಕಡು ಬಡವ, ಶ್ರಮಿಕರ ಮಕ್ಕಳ ಭವಿಷ್ಯ ಉತ್ತಮಗೊಳಿಸಲು ಜನಪ್ರತಿನಿಧಿಗಳು ದಾನಿಗಳು ಸರ್ಕಾರಿ ಶಾಲೆಗಳ ಸರ್ವತೋಮುಖ ಪ್ರಗತಿಗೆ ಕೈ ಜೋಡಿಸಲು ಮುಂದಾಗಬೇಕು ಎಂದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ ಮಾತನಾಡಿ, ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು, ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸಬೇಕು. ಪಾಲಕರು ಮಕ್ಕಳಿಗೆ ಅನ್ಯಕೆಲಸಗಳಿಗೆ ತೊಡಗಿಸದೆ, ಹೆಚ್ಚಿನ ಸಮಯವನ್ನು ಅಭ್ಯಾಸಕ್ಕೆ ಮೀಸಲಿರಿಸಬೇಕು. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸುವುದಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಶಾಲೆಗೆ, ಹೆತ್ತವರಿಗೆ ಕೀರ್ತಿ ತರುವುದರೊಂದಿಗೆ, ನಿಮ್ಮ ಮುಂದಿನ ಭವಿಷ್ಯ ಉಜ್ವಲಗೊಳಿಸಬೇಕು ಎಂದರು. ಎಂಪಿಸಿಎಸ್​ ಮಾಜಿ ಅಧ್ಯಕ್ಷ ವೆಂಕಟೇಶ್​, ಮುಖಂಡರಾದ ಶಿವರಾಜ್​, ಅಪ್ಪಣ್ಣ, ರವಿ, ಸಿಆರ್​ಪಿ ಸತೀಶ್​, ಮುಖ್ಯ ಶಿಕ್ಷಕ ರಮೇಶ್​ ಅತಿಥಿ ಶಿಕ್ಷಕಿ ರೇಣುಕಾ ಇದ್ದರು.