ಹನೂರಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಗುಂಡು ಎಸೆಯುವುದರ ಮೂಲಕ ಚಾಲನೆ ನೀಡಿದರು. ಮುಮ್ತಾಜ್ ಬಾನು, ಆನಂದ್‌ಕುಮಾರ್, ಪವಿತ್ರಾ, ಸುರೇಶ್ ಇತರರು ಇದ್ದರು.  
ಜಿಲ್ಲೆ

ಮಲೆ ಮಹದೇಶ್ವರ ಕ್ರೀಡಾಂಗಣ ಅಭಿವೃದ್ಧಿಗೆ ಆದ್ಯತೆ

ಹನೂರು: ಪಟ್ಟಣದ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣಕ್ಕೆ ಮೂಲಸೌಕರ್ಯ ಒದಗಿಸುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ಪಟ್ಟಣದ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಮಾತನಾಡಿದರು.

ಹನೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲೂ ಸಾಧನೆಗೈದ ಸಾಧಕರಿದ್ದಾರೆ. ಈ ದಿಸೆಯಲ್ಲಿ ದಸರಾ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಿರುವುದು ಯುವಕರಿಗೆ ಸ್ಫೂರ್ತಿದಾಯಕ. ಆದ್ದರಿಂದ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಜಯ ಗಳಿಸಿ ತಾಲೂಕಿಗೆ ಕೀರ್ತಿ ತರಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದರೆ 7 ಲಕ್ಷ ರೂ., ಬೆಳ್ಳಿ ಪದಕ ಪಡೆದರೆ 5 ಲಕ್ಷ ರೂ. ಹಾಗೂ ಕಂಚಿನ ಪದಕಕ್ಕೆ 3 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಇತ್ತೀಚಿಗೆ ನಡೆದ ಕ್ರೀಡಾಕೂಟದಲ್ಲಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಆದ್ದರಿಂದ ಶಿಕ್ಷಕರು ಈ ಬಗ್ಗೆ ಶಾಲೆಯಲ್ಲಿ ಮಕ್ಕಳಿಗೆ ತಿಳಿಸಬೇಕು. ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡಬೇಕು ಎಂದು ಸೂಚಿಸಿದರು.

ಇನ್ನು ಜಿಲ್ಲಾ ಕೇಂದ್ರವನ್ನು ಹೊರತುಪಡಿಸಿದರೆ ಹನೂರಿನ ಕ್ರೀಡಾಂಗಣ 8 ಎಕರೆ ಪ್ರದೇಶವನ್ನು ಹೊಂದಿದ್ದು, ವಿಶಾಲವಾಗಿದೆ. ಇಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಅಗತ್ಯ ಮೂಲಸೌಕರ್ಯ ಒದಗಿಸುವಿಕೆ ಸೇರಿದಂತೆ ಸಂಪೂರ್ಣ ಅಭಿವೃದ್ಧಿಪಡಿಸಬೇಕೆನ್ನುವುದು ನನ್ನ ಒತ್ತಾಸೆಯಾಗಿದ್ದು, ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ 3 ಕ್ರೀಡಾ ವಸತಿ ಶಾಲೆ ಇದ್ದು, ಉತ್ತಮ ಸೌಕರ್ಯವಿದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ. ಆದ್ದರಿಂದ ಪಾಲಕರು ಈ ಬಗ್ಗೆ ಮನದಟ್ಟು ಮಾಡಿಕೊಂಡು ಮಕ್ಕಳನ್ನು ಶಾಲೆಗೆ ದಾಖಲಿಸಬೇಕು. ಕ್ರೀಡೆಯಲ್ಲಿ ಸಾಧನೆಗೈದು ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.

ಪಪಂ ಅಧ್ಯಕ್ಷೆ ಮುಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್‌ಕುಮಾರ್, ಸದಸ್ಯೆ ಪವಿತ್ರಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಳ್ಯ ರಾಚಯ್ಯ ಇತರರು ಇದ್ದರು.