ಗಜೇಂದ್ರಗಡ: ಇಲ್ಲಿನ ಪುರಸಭೆಗೆ ಈ ಬಾರಿ 22.34 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದ್ದು, ಉಳಿತಾಯದ ಹಣದಲ್ಲಿ ಪಟ್ಟಣಕ್ಕೆ ಪ್ರವೇಶಿಸುವ ಮಾರ್ಗಗಳಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡಲಾಗುವುದು. ಜತೆಗೆ ಉಣಚಗೇರಿ ಆಶ್ರಯಮನೆಗಳ ಯೋಜನೆಗೆ ಜಾಗ, ಪಟ್ಟಣದ ಎಲ್ಲ ಸಾರ್ವಜನಿಕರ ಶೌಚಗೃಹಗಳಿಗೆ ಬೋರ್‌ವೆಲ್ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ ಎಂದು ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸುಳಿವು ನೀಡಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಶುಕ್ರವಾರ 2025- 26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸುವುದು ನಮ್ಮ ಆದ್ಯತಾ ಪಟ್ಟಿಯಲ್ಲಿದೆ. ನೀರಿನ ಕರ 47 ಲಕ್ಷ ರೂ. ಮಾತ್ರ ಸಂಗ್ರಹವಾಗಿದ್ದು, ಇನ್ನೂ 1 ಕೋಟಿ ತೆರಿಗೆ ಬಾಕಿ ಉಳಿದಿದೆ ಎಂದು ಸಭೆಗೆ ತಿಳಿಸಿದರು.
ವಿರೋಧ ಪಕ್ಷದ ನಾಯಕ ಮೂಕಪ್ಪ ನಿಡಗುಂದಿ ಮಾತನಾಡಿ, 18ನೇ ವಾಡಿನಲ್ಲಿ ಸಾರ್ವಜನಿಕ ಶೌಚಗೃಹ ರಿಪೇರಿ ಮಾಡಿದರೆ ಎಲ್ಲರೂ ಶೌಚಗೃಹ ಬಳಸುತ್ತಾರೆ. ಇಲ್ಲದಿದ್ದರೆ ಬಯಲು ಶೌಚಕ್ಕೆ ಹೋಗುತ್ತಾರೆ. ಇದರಿಂದ ಪುರಸಭೆಗೆ ಕೆಟ್ಟ ಹೆಸರು ಎಂದರು.
ನೀರಿನ ಕರ, ಮನೆ ತೆರಿಗೆ ಕಟ್ಟದವರಿಗೆ ಯಾವುದೇ ಆಸ್ತಿ ಹಸ್ತಾಂತರ, ಉತಾರ ನೀಡದಿದ್ದರೆ ಬಾಕಿ ಇದ್ದ ಎಲ್ಲ ತೆರಿಗೆಯೂ ವಸೂಲಿ ಆಗುತ್ತದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ 10ನೇ ವಾರ್ಡಿನ ಸದಸ್ಯ ರೂಪಲೇಶ ರಾಠೋಡ, ತೆರಿಗೆ ಸಂಗ್ರಹಕಾರರು ಮನೆಮನೆಗೆ ಹೋಗುವುದನ್ನು ಬಿಟ್ಟು ಚಹಾದಂಗಡಿಗಳಲ್ಲಿ ಕುಳಿತರೆ ಹೇಗೆ ತೆರಿಗೆ ಸಂಗ್ರಹವಾಗುತ್ತದೆ ಎಂದು ತೆರಿಗೆ ಸಂಗ್ರಹಾಕಾರರ ವಿರುದ್ಧ ಅಸಮಾಧಾನ ಹೊರಹಾಕಿದರು.
ಚರಂಡಿಗಳನ್ನು ಸ್ವಚ್ಛ ಮಾಡಲು ನೂತನ ಯಂತ್ರಗಳು ಬಂದಿದ್ದು, ಅವುಗಳ ಮಾಹಿತಿ ಪಡೆಯಬೇಕು. ಇದರಿಂದ ನಿರ್ವಹಣೆ ಸರಳವಾಗಿ ಸಾಗಲಿದೆ ಎಂದು ಮೂಕಪ್ಪ ಸಲಹೆ ನೀಡಿದರು.
ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ ಪುರಸಭೆ, ಕಳೆದ ಬಾರಿ ಬಜೆಟ್‌ನಲ್ಲಿ ಹಾಕಿಕೊಂಡ ಅಭಿವೃದ್ಧಿ ಕಾರ್ಯಗಳೇ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. 2024- 25ನೇ ಸಾಲಿನಲ್ಲಿ ಪಟ್ಟಣದಲ್ಲಿನ ಮಾರ್ಗಗಳಲ್ಲಿ ಸ್ವಾಗತ ಕಮಾನು, ಶುದ್ಧ ಕುಡಿಯುವ ನೀರಿನ ಘಟಕಗಳ ಪ್ರಾರಂಭ, ಶೌಚಗೃಹ ಸೇರಿ ಅನೇಕ ಕಾಮಗಾರಿಗಳು ಅನುಷ್ಠಾನವಾಗಿಲ್ಲ ಎಂದಾಗ, ಪುರಸಭೆ ಸಹಾಯಕ ಇಂಜಿನಿಯರ್ ಪಿ.ಎನ್. ದೊಡ್ಡಮನಿ ಪ್ರತಿಕ್ರಿಯಿಸಿ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸುತ್ತಿದ್ದೇವೆ. ಇನ್ನೂ ಕೆಲ ದಿನಗಳಲ್ಲಿ ಪ್ರಾರಂಭಗೊಳುತ್ತವೆ. ಸಾರ್ವಜನಿಕ ಶೌಚಗೃಹ ನಿರ್ವಹಣೆಗೆ ಯಾರೂ ಮುಂದೆ ಬರುತ್ತಿಲ್ಲ ಎಂದು ಉತ್ತರಿಸಿದರು.
12ನೇ ವಾಡಿನ ಸದಸ್ಯ ಕನಕಪ್ಪ ಅರಳಿಗಿಡದ ಮಧ್ಯೆ ಪ್ರವೇಶಿಸಿ ಶೌಚಗೃಹ ನಿರ್ವಹಣೆ ಮಾಡಿದವರಿಗೆ 8- 10 ತಿಂಗಳ ವೇತನ ತೆಡೆ ಹಿಡಿದರೆ ಯಾರು ನಿರ್ವಹಣೆ ಮಾಡುತ್ತಾರೆ ಎಂದು ಮರುಪ್ರಶ್ನಿಸಿದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ಸದಸ್ಯರಾದ ಶಿವರಾಜ ಘೋರ್ಪಡೆ, ವೀರಪ್ಪ ಪಟ್ಟಣಶೆಟ್ಟಿ, ರಾಜು ಸಾಂಗ್ಲಿಕರ, ಯಮನಪ್ಪ ತಿರಕೋಜಿ, ವೆಂಕಟೇಶ ಮುದಗಲ್ಲ, ಕನಕಪ್ಪ ಅರಳಿಗಿಡದ, ರೂಪಲೇಶ ರಾಠೋಡ, ಶರಣಪ್ಪ ಉಪ್ಪಿನಬೆಟಗೇರಿ, ಲೀಲಾವತಿ ಸವಣೂರ, ಕೌಸರಬಾನು ಹುನಗುಂದ ಹಾಗೂ ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಹೂಗಾರ, ಉಮೇಶ ರಾಠೋಡ ಇತರರಿದ್ದರು.