ಜಮಖಂಡಿ ನಗರದ ಕಾಂಗ್ರೆಸ್ ಮುಖಂಡ ತೌಫಿಕ ಪಾರ್ಥನಳ್ಳಿ ನಿವಾಸದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ ಮಾತನಾಡಿದರು. ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ನಿರಜ್ ಬಂಡಾರಿ, ತೌಫಿಕ ಪಾರ್ಥನಳ್ಳಿ ಇದ್ದರು. 
ಜಿಲ್ಲೆ

ಕಾಂಗ್ರೆಸ್‌ನಲ್ಲಿ ಯುವಕರಿಗೆ ಆದ್ಯತೆ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಅವರು ಯುವಕರಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ ಹೇಳಿದರು.

ನಗರದ ಕಾಂಗ್ರೆಸ್ ಮುಖಂಡ ತೌಫಿಕ ಪಾರ್ಥನಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯವಾಗಿ ಪ್ರಭಾವ ಹೊಂದಿರುವ ಯುವಕರಿಗೆ ಪಕ್ಷದಲ್ಲಿ ಅವಕಾಶ ಸಿಗುತ್ತದೆ ಎಂದರು.

ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸರಿಯಾಗಿ ಮುಟ್ಟಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪಕ್ಷ ಸಂಘಟನೆಗೆ ಮತ್ತಷ್ಟು ಶಕ್ತಿ ತುಂಬಲು ಯುವಕರು ಉತ್ಸುಕರಾಗಿದ್ದಾರೆ ಎಂದರು.

ಯುವ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಅಧಿಕಾರದ ಚುಕ್ಕಾಣಿ ಹಿಡಿದರೆ ಸಾಲದು. ಅದಕ್ಕೆ ತಕ್ಕಂತೆ ಪಕ್ಷದ ಕೆಲಸ ಮಾಡಬೇಕು. ಕೆಲಸ ಮಾಡದಿದ್ದರೆ ಅಂಥವರು ಮನೆಯಲ್ಲೇ ಇರಿ. ಪಕ್ಷ ಸಂಘಟಕರಿಗೆ ಅವಕಾಶ ಕಲ್ಪಿಸುತ್ತೇವೆ ಎಂದರು.

ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪೂರ ಮಾತನಾಡಿ, ಬಿಜೆಪಿಯವರು ಯಾವುದೇ ದಾಖಲೆ ಇಲ್ಲದೆ ಸುಳ್ಳು ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಹುರುಳಿಲ್ಲ. ಬಡವರ ಪರವಾಗಿ ಕಾಂಗ್ರೆಸ್ ಸರ್ಕಾರ ಯೋಜನೆಗಳನ್ನು ನೀಡುತ್ತಿದೆ. ಇದು ಬಿಜೆಪಿಗರ ನಿದ್ದೆಗೆಡಿಸಿದೆ ಎಂದರು.

ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ನಿರಜ್ ಬಂಡಾರಿ, ತೌಫಿಕ ಪಾರ್ಥನಳ್ಳಿ ಇತರರು ಇದ್ದರು.