ಜಿಲ್ಲೆ

ಕಂದಾಯ ವ್ಯಾಜ್ಯ ವಿಲೇವಾರಿಗೆ ಆದ್ಯತೆ

ಹಾಸನ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡುವರೆ ವರ್ಷದಲ್ಲಿ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಕೆಲಸಗಳು ಪೂರ್ಣಗೊಳ್ಳದೆ ಕಂದಾಯ ಇಲಾಖೆ ಈ ಹಿಂದೆ ಸಮಸ್ಯೆಗಳ ಆಗರವಾಗಿತ್ತು. ಭೂ ಮಾಲೀಕತ್ವ ನೆಮ್ಮದಿ ಕೊಡುವುದಕ್ಕಿಂತ ನೆಮ್ಮದಿ ಕಸಿದಿತ್ತು. ನಮ್ಮ ಸರ್ಕಾರ ಜವಾಬ್ದಾರಿ ವಹಿಸಿಕೊಂಡ ಮೇಲೆ ಸಾಕಷ್ಟು ಬದಲಾವಣೆ ತರಲಾಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಹಸೀಲ್ದಾರ್ ನ್ಯಾಯಾಲಯದಲ್ಲಿ ಯಾವುದೇ ಕಂದಾಯ ಪ್ರಕರಣಗಳನ್ನು 90 ದಿನಗಳಲ್ಲಿ ಮುಗಿಸಬೇಕು. ೀ ಹಿಂದೆ ತಹಸೀಲ್ದಾರ್ ನ್ಯಾಯಾಲಯದಲ್ಲಿ ವ್ಯಾಜ್ಯ ವಿಲೇವಾರಿಯಾಗಲು 220 ದಿನ ತೆಗೆದುಕೊಳ್ಳುತ್ತಿತ್ತು. ಈಗ 87 ದಿನಗಳಲ್ಲಿ ವಿಲೇವಾರಿಯಾಗುತ್ತಿದೆ. ರಾಜ್ಯದಲ್ಲಿ ನಿಗದಿತ ಅವಧಿ ಮೀರಿದ 10,774 ಪ್ರಕರಣಗಳಿದ್ದವು. ಅವುಗಳನ್ನು 694ಕ್ಕೆ ಇಳಿಸಲಾಗಿದೆ. ಎಸಿ ಕೋರ್ಟ್‌ನಲ್ಲಿ 1 ವರ್ಷಕ್ಕೂ ಹೆಚ್ಚಿನ ಅವಧಿಗೆ ವಿಲೇ ಆಗದೆ ಇದ್ದ ಪ್ರಕರಣಗಳು 59,339 ಇದ್ದವು. ಅದನ್ನು 12,634ಕ್ಕೆ ಇಳಿಸಲಾಗಿದೆ. ಉಳಿದಿರುವುದನ್ನು ಜನವರಿ-ಫೆಬ್ರವರಿಯಲ್ಲಿ ಮುಗಿಸುವ ಪ್ರಯತ್ನ ಮಾಡಲಾಗಿದೆ ಎಂದವರು ವಿವರಿಸಿದರು.

ಡಿಸಿ ಕೋರ್ಟ್‌ನಲ್ಲಿ ಕೋರ್ಟ್‌ನಲ್ಲಿ 5ವರ್ಷಕ್ಕಿಂತ ಹೆಚ್ಚಿನ ಸಮಯ ವಿಲೇ ಆಗದ 30,732 ಪ್ರಕರಣಗಳಿದ್ದವು. ಅದರಲ್ಲಿ 4,031ಉಳಿಸಿಕೊಳ್ಳಲಾಗಿದೆ ಎಂದು ವಿವರಿಸಿದರು. ಅಧಿಕಾರಿಗಳು ಕೆಲಸವನ್ನು ಮೈಮೇಲೆ ಹಾಕಿಕೊಂಡು ಆಂದೋಲನ ಮಾದರಿ ಕೆಲಸ ಮಾಡುತ್ತಿದ್ದಾರೆ. ಕೆಲವೊಂದು ಪ್ರಕರಣಗಳನ್ನು ಜನರು ಕೇಳದಿದ್ದರೂ ನಾವೇ ವಿಲೇವಾರಿ ಮಾಡುತ್ತಿದ್ದೇವೆ ಎಂದರು. ಕಂದಾಯ ಪ್ರಕರಣಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದಲೇ 20 ಹೆಚ್ಚುವರಿ ಎಸಿಗಳ ನೇಮಕಮಾಡಿಕೊಂಡಿದ್ದೇವೆ ಎಂದರು.

ಹಾಸನ ಎಸಿ ಕೋರ್ಟ್‌ನಲ್ಲಿ 906 ಪ್ರಕರಣಗಳು ಬಾಕಿ ಇದ್ದವು. ಅವುಗಳನ್ನು 112ಕ್ಕೆ ಇಳಿಸಲಾಗಿದೆ. ಹಾಸನ ಡಿಸಿ ಕೋರ್ಟ್‌ನಲ್ಲಿ 732 ಬಾಕಿ ಇದ್ದ ಪ್ರಕರಣಗಳನ್ನು ವಿಲೇವಾರಿ ಮಾಡಿ 194ಕ್ಕೆ ಇಳಿಸಲಾಗಿದೆ ಎಂದರು.

2,798 ಕೋಟಿ ಬೆಳೆ ಪರಿಹಾರ: ಹಾಸನ: ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸರಾಸರಿ 852 ಮಿ. ಮೀ. ಮಳೆಯಾಗಿದೆ.ರಾಜ್ಯದಲ್ಲಿ ಬೆಳೆ ಹಾನಿ ಸಮೀಕ್ಷೆ ಪೂರ್ಣವಾಗಿದೆ. ಸಮೀಕ್ಷೆ ಪ್ರಕಾರ 18,50,000 ಜನರ 14,50,000 ಹೆಕ್ಟೇರ್ ಭೂಮಿಯಲ್ಲಿ ಬೆಳೆದ ಫಸಲು ನಷ್ಟವಾಗಿದ್ದು, 2,798 ಕೋಟಿ ರೂ. ಪರಿಹಾರ ಪಾವತಿ ಮಾಡಲಾಗುತ್ತಿದೆ ಎಂದು ಹೇಳಿದರು.ಈಗಾಗಲೇ ಕೆಲವು ಜಿಲ್ಲೆಗಳಲ್ಲಿ 200 ಕೋಟಿ ರೂ. ಹಣ ವಿತರಿಸಲಾಗಿದೆ ಎಂದರು.ಎಸ್‌ಡಿಆರ್‌ಎಫ್ ನಿಧಿಯಿಂದ 1,550 ಕೋಟಿ ರೂ ಹಾಗೂ ರಾಜ್ಯ ಸರ್ಕಾರ 1248 ಕೋಟಿ ರೂ ಹೆಚ್ಚುವರಿಯಾಗಿ ಸೇರಿಸಿ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದರು.

ಮೂಲ ಸೌಕರ್ಯಕ್ಕೆ ಧಕ್ಕೆ: ಅಧಿಕ ಮಳೆಯಿಂದ ಜಿಲ್ಲೆಯಲ್ಲಿ ಮೂಲ ಸೌಕರ್ಯಕ್ಕೆ ಧಕ್ಕೆಯಾಗಿದೆ. ರಸ್ತೆ, ಸೇತುವೆ, ಶಾಲೆ, ಅಂಗನವಾಡಿಗಳು ಹಾನಿಗೊಳಗಾಗಿವೆ. ಸಂಪುಟದ ಅನುಮತಿ ಪಡೆದು ಕೇಂದ್ರ ಸರ್ಕಾರಕ್ಕೆ ಎನ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ಒದಗಿಸಲು ಮನವಿ ಸಲ್ಲಿಸಲಾಗುವುದು ಎಂದರು. ರಾಜ್ಯದಲ್ಲಿ ಮಳೆಯಿಂದ 3, 450 ಕೋಟಿ ರೂ.ಗಳಷ್ಟು ಮೂಲ ಸೌಕರ್ಯಕ್ಕೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರದಿಂದ 1,545 ಕೋಟಿ ರೂ.ಕೇಳಲಾಗಿದೆ. ಎನ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ಕೊಡಬೇಕಾದ ಕರ್ತವ್ಯ ಕೇಂದ್ರ ಸರ್ಕಾರದ್ದು ಎಂದರು.

ದೇಶದಲ್ಲೇ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವಲ್ಲಿ ರಾಜ್ಯವು 2ನೇ ಸ್ಥಾನದಲ್ಲಿ ಇದೆ. ಈ ಹಿಂದೆ ಬರ ಬಂದಾಗ ಕೇಂದ್ರದಿಂದ ಪರಿಹಾರ ನೀಡಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡಿ ಪರಿಹಾರ ಪಡೆದುಕೊಳ್ಳಬೇಕಾಯಿತು. ಕೇಂದ್ರ ಸರ್ಕಾರ ನಮ್ಮ ಹಕ್ಕಿನ ಪ್ರಮಾಣ ನೀಡಬೇಕಾದ ಸ್ಥಿತಿ ಇದೆ ಎಂದು ವಿಷಾದಿಸಿದರು.

ಸರ್ಕಾರದಲ್ಲಿ ಪ್ರಿಂಟಿಂಗ್ ಮಷಿನ್ ಇಲ್ಲ: ಕರ್ನಾಟಕದಲ್ಲಿ ಯಾವುದೇ ಮೇಲ್ದರ್ಜೆಗೇರಿದ ನಗರ ಸಭೆಗಳಿಗೆ 3ವರ್ಷಗಳವರೆಗೆ ಹೆಚ್ಚುವರಿ ಅನುದಾನ ನೀಡುವುದಿಲ್ಲ. ಇದು ಹಲವು ಕಾಲದಿಂದಲೂ ನಡೆದುಕೊಂಡ ಪದ್ಧತಿ ಎಂದು ಕೃಷ್ಣಬೈರೇಗೌಡ ಹೇಳಿದರು.

ನಗರ ಸಭೆಗೆ ಬರುವ ಅನುದಾನದಲ್ಲೇ ಕಾರ್ಯನಿರ್ವಹಣೆ ಮಾಡಬೇಕು. ಇದು ಉನ್ನತೀಕರಣದ ಆದೇಶದಲ್ಲೇ ಸೇರಿಕೊಂಡಿದೆ. ಇದು ಇಡೀ ರಾಜ್ಯಕ್ಕೆ ಸೇರಿಕೊಂಡಿದೆ. ಇದು ಆಡಳಿತ ವ್ಯವಸ್ಥೆಯಲ್ಲಿ ನಡೆದು ಬಂದಿರುವ ಪದ್ಧತಿ ಎಂದರು. ಹಾಸನ ಪುರಸಭೆಯಲ್ಲಿ ವಯಸ್ಸಿಗೆ ಮೀರಿದ ಸಿಬ್ಬಂದಿ ಇದ್ದಾರೆ. ಅವರು ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ಸುಮ್ಮನೇ ವೇತನ ನೀಡಲಾಗುತ್ತಿದೆ. ಇದರ ಬಗ್ಗೆ ಯಾರು ಜವಾಬ್ದಾರಿ ತೆಗೆದುಕೊಳ್ಳಬೇಕು. ಬೇಕಾ ಬಿಟ್ಟಿ ಹಣ ನೀಡಲು ಸರ್ಕಾರದಲ್ಲಿ ಪ್ರಿಂಟಿಂಗ್ ಮಷಿನ್ ಇಲ್ಲ. ದಾರಿಯಲ್ಲಿ ಹೋಗುವ ಬೀಡಿ ಸೇದುವವನ ಟ್ಯಾಕ್ಸ್ ಹಣದಿಂದ ಹಿಡಿದು ಟೂತ್ ಪೇಸ್ಟ್ ಟ್ಯಾಕ್ಸ್ ಹಣದ ವರೆಗೆ

ಬರುವ ತೆರಿಗೆಯಿಂದ ಸರ್ಕಾರ ನಡೆಸಲಾಗುತ್ತದೆ. ಸರ್ಕಾರಿ ಹಣವನ್ನು ಬೇಕಾಬಿಟ್ಟಿ ವ್ಯಯಮಾಡಬಾರದು. ಮಹಾನಗರ ಪಾಲಿಕೆಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕೆಂದರು.

ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟ: ಕಳೆದ ಸರ್ಕಾರ ಬೇಕಾಬಿಟ್ಟಿ ಜಿಲ್ಲೆಗೊಂದು ಯೂನಿವರ್ಸಿಟಿ ನಿರ್ಮಾಣಮಾಡುವ ಮೂಲಕ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡಿದೆ ಎಂದು ಕೃಷ್ಣಬೈರೇಗೌಡ ಬೇಸರ ವ್ಯಕ್ತಪಡಿಸಿದರು.

ಪೈಪೋಟಿಯ ಯುಗದಲ್ಲಿ ದೊಡ್ಡ-ದೊಡ್ಡ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗ ಸಿಗುವುದು ಕಷ್ಟ ಸಾಧ್ಯವಾಗಿದೆ. ಚಿಕ್ಕ-ಚಿಕ್ಕ ಜಿಲ್ಲೆಯ ವಿಶ್ವವಿದ್ಯಾಲಯದ ಪ್ರಮಾಣಪತ್ರ ತೆಗೆದುಕೊಂಡು ಹೋದರೆ ದೊಡ್ಡ- ದೊಡ್ಡ ಕಂಪನಿಗಳು ಪರಿಗಣಿಸುತ್ತವೆಯೇ ಎಂದು ಪ್ರಶ್ನಿಸಿದರು.

ಹೊಸ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಬೋಧಕರ ನೇಮಕಮಾಡಲಾಗಿದೆಯೇ..? ವಿಶ್ವವಿದ್ಯಾಲಯಕ್ಕೆ ಸಂಶೋಧನಾ ಕೇಂದ್ರಗಳಿರಬೇಕು ಅವುಗಳನ್ನು ಪೂರೈಸಲಾಗಿದೆಯೇ ಎಂದು ಪ್ರಶ್ನಿಸಿದರು.

ಸಂಸದ ಶ್ರೇಯಸ್ ಪಟೇಲ್, ಡಿಸಿ ಲತಾಕುಮಾರಿ, ಜಿಪಂ ಸಿಇಒ ಪೂರ್ಣಿಮಾ ಇದ್ದರು.