ಶಿಕಾರಿಪುರ: ಚುನಾವಣೆಗೆ ಮುನ್ನ ಹೇಳಿದಂತೆ ಶಾಸಕರ ಕಚೇರಿಯನ್ನು ಆರಂಭಿಸಲಾಗಿದೆ. ವಾರದಲ್ಲಿ ಹೆಚ್ಚು ದಿನ ನಾನೂ ಇಲ್ಲಿ ಸಿಗುತ್ತೇನೆ. ಈ ಹೊಸ ಕಚೇರಿಯಿಂದ ಜನರಿಗೆ ಅನುಕೂಲವಾಗಬೇಕು. ಶಾಸಕರ ಕಚೇರಿಯು ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.
ಶುಕ್ರವಾರದ ಆಡಳಿತ ಸೌಧದ ಕೊಠಡಿ ಸಂಖ್ಯೆ 6ರಲ್ಲಿ ತಮ್ಮ ನೂತನ ಕಚೇರಿ ಉದ್ಘಾಟನೆ ವೇಳೆ ಮಾತನಾಡಿ, ಪ್ರತಿನಿತ್ಯ ಸಾಕಷ್ಟು ಅಹವಾಲುಗಳನ್ನು ಹೊತ್ತು ಜನಸಾಮಾನ್ಯರು ಶಿಕಾರಿಪುರಕ್ಕೆ ಬರುತ್ತಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತವಾದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಕಚೇರಿಯು ಅನುಕೂಲವಾಗಲಿದೆ ಎಂದರು.
ಸ್ಥಳೀಯ ಸಮಸ್ಯೆಗಳು ಸಾಕಷ್ಟಿವೆ. ಕಾರ್ಯಕರ್ತರು ಪ್ರತಿದಿನ ಕಚೇರಿಗೆ ಭೇಟಿ ಕೊಡುವ ಅಭ್ಯಾಸ ಮಾಡಿಕೊಳ್ಳಬೇಕು. ಗ್ರಾಮಾಂತರ ಪ್ರದೇಶಗಳಿಂದ ಬಂದಿರುವ ಜನಸಾಮಾನ್ಯರ ಕುಂದು ಕೊರತೆಗಳ ಬಗ್ಗೆ ಗಮನಹರಿಸಿ. ಯಾವ ಯಾವ ಇಲಾಖೆಗಳಲ್ಲಿ ಜನರ ಕೆಲಸ ಕಾರ್ಯಗಳಾಗಬೇಕು ಎಂಬುದನ್ನು ಪಟ್ಟಿ ಮಾಡಿ, ಕಚೇರಿಗೆ ತಲುಪಿಸಿ. ನಾವು ಎಂದೆಂದಿಗೂ ಜನರ ಕಷ್ಟಗಳಿಗೆ ಸೊಂದಿಸಬೇಕು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಅವುಗಳನ್ನು ಜನಮನಕ್ಕೆ ತಲುಪಿಸುವ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನಪರವಾದ, ಬಡವರ, ರೈತರ, ಯುವ ಶಕ್ತಿ ಮತ್ತು ಸ್ತ್ರೀಯರ ಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮಾಂತರ ಪ್ರದೇಶದ ಎಷ್ಟೋ ಜನರಿಗೆ ಎಲ್ಲಾ ಯೋಜನೆಗಳು ಗೊತ್ತಿಲ್ಲ. ಅವುಗಳನ್ನು ನಮ್ಮ ಕಾರ್ಯಕರ್ತರು ತಲುಪಿಸುವ ಕೆಲಸ ವಾಡಬೇಕು. ಜನರ ಯಾವುದೇ ಕಾರ್ಯಗಳಿರಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಮಾಡಿ ಕೊಡಿ ಎಂದು ಹೇಳಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಪುರಸಭೆ ಸದಸ್ಯರಾದ ರೂಪಕಲಾ ಹೆಗಡೆ, ಪಾಲಾಕ್ಷಪ್ಪ, ಲಕ್ಷ್ಮೀ ಮಹಾಲಿಂಗಪ್ಪ, ಪ್ರಶಾಂತ ಜೀನಳ್ಳಿ, ಬೆಣ್ಣೆ ದೇವೇಂದ್ರಪ್ಪ, ಕೆ.ಹಾಲಪ್ಪ, ಪ್ರಮುಖರಾದ ಟಿ.ಎಸ್.ಮೋಹನ್, ಗಾಯತ್ರಿ ದೇವಿ ಇತರರಿದ್ದರು.