ಜಿಲ್ಲೆ

ಘನತ್ಯಾಜ್ಯದಿಂದ ಅನಿಲ ಉತ್ಪಾದನೆಗೆ ಆದ್ಯತೆ: ತುಷಾರ್ ಗಿರಿನಾಥ್

ಆರ್.ತುಳಸಿಕುಮಾರ್

ಬೆಂಗಳೂರು: ಮಹಾನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಬಳಸಿಕೊಂಡು ಅನಿಲ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು ಆದ್ಯತೆ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಚೆನ್ನೈಗೆ ಭೇಟಿ ನೀಡಿ ಅಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ವೀಕ್ಷಿಸಿದ್ದಾರೆ. ಜತೆಗೆ ಕಸದಿಂದ ಅನಿಲ ಉತ್ಪಾದಿಸುವ ಬಗ್ಗೆಯೂ ಅಧ್ಯಯನ ನಡೆಸಿದ್ದಾರೆ. ಹೈದರಾಬಾದ್ ಹಾಗೂ ಇಂದೂರ್‌ನಲ್ಲಿ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ಇತರ ನಗರಗಳಲ್ಲಿರುವ ಉತ್ತಮ ವ್ಯವಸ್ಥೆಯನ್ನು ಮಾದರಿಯಾಗಿಟ್ಟುಕೊಂಡು ನಮ್ಮದೇ ಸ್ವಂತ ಕಾನ್ಸೆಪ್ಟ್‌ನಲ್ಲಿ ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.

ಪ್ರಸ್ತುತ ಬೆಂಗಳೂರು ತ್ಯಾಜ್ಯ ನಿರ್ವಹಣೆ ನಿಗಮ ಕಾರ್ಯಾಚರಿಸುತ್ತಿರುವುದರಿಂದ ನಗರದಕ್ಕೆ ಸಂಬಂಧಿಸಿದ ತ್ಯಾಜ್ಯ ವಿಷಯಗಳು ಈ ಸಂಸ್ಥೆಯೇ ನೋಡಿಕೊಳ್ಳುತ್ತಿದೆ. ಕಸ ಗುತ್ತಿಗೆದಾರರಿಗೆ ಬಾಕಿ ಬಿಲ್ ತಡವಾಗಿರುವುದು ಗಮನಕ್ಕೆ ಬಂದಿದ್ದು, ಜಿಎಸ್‌ಟಿ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದನ್ನು ನಿವಾರಿಸಿಕೊಂಡು ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಗಡುವಿನೊಳಗೆ ಗುಂಡಿಗಳಿಗೆ ಮುಕ್ತಿ:

ಪಾಲಿಕೆ ವ್ಯಾಪ್ತಿಯ ಎಲ್ಲೆಡೆ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ. ಕೆಲವೆಡೆ ಮಾತ್ರ ವಿಳಂಬವಾಗುತ್ತಿದೆ. ಡಿಸಿಎಂ ನೀಡಿರುವ ಗಡುವಿನೊಳಗೆ ಗುಂಡಿಗಳನ್ನು ಪತ್ತೆ ಹಚ್ಚಿ ವಾಹನ ಹಾಗೂ ಜನರ ಓಡಾಟಕ್ಕೆ ಅನುಕುಲವಾಗುವ ರೀತಿ ಅನುವು ಮಾಡಿಕೊಡುವಂತೆ ಆಯಾ ವಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಗಣೇಶೋತ್ಸವಕ್ಕೆ ಏಕಗವಾಕ್ಷಿ ವ್ಯವಸ್ಥೆ:

ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಪಾಲಿಕೆ, ಪೊಲೀಸ್, ಬೆಸ್ಕಾಂ ಸಹಿತ ಇತರ ಸಂಸ್ಥೆಗಳು ಸೇರಿ ಏಕಗವಾಕ್ಷಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸಂಘಟನೆಗಳಿಗೆ ಎಲ್ಲ ಅನುಮತಿಯನ್ನು ಒಂದೇ ಕಡೆ ಲಭ್ಯವಾಗುವಂತೆ ಮಾಡಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಗಣಪತಿ ಮೂರ್ತಿಗಳ ವಿಸರ್ಜನೆಗೆ ಕಲ್ಯಾಣಿಗಳ ಜತೆಗೆ ತಾತ್ಕಾಲಿಕ ವಿಸರ್ಜನಾ ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಪಿಒಪಿ ಗಣಪತಿ ಮೂರ್ತಿಗಳ ತಯಾರಿಕೆ, ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜನರು ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಬೇಕು. ಈ ಬಗ್ಗೆ ಪಾಲಿಕೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.