ರಟ್ಟಿಹಳ್ಳಿ: ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕೆರೆಗಳ ಅಭಿವೃದ್ಧಿ, ಕೆರೆ ತುಂಬಿಸುವುದು ಮತ್ತು ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಮದಗ-ಮಾಸೂರು ಕೆಂಚಮ್ಮನ ಕೆರೆಗೆ ತಮ್ಮ ಅಪಾರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಶುಕ್ರವಾರ ಬಾಗಿನ ಸಮರ್ಪಿಸಿ ಅವರು ಮಾತನಾಡಿದರು. ರಟ್ಟಿಹಳ್ಳಿ ಮತ್ತು ಹಿರೇಕೆರೂರು ತಾಲೂಕನ್ನು ಬರಗಾಲ ಪೀಡಿತ ತಾಲೂಕು ಘೊಷಣೆಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ತಾಲೂಕಿನ ಮದಗ-ಮಾಸೂರು ಕೆರೆ ಹೂಳು ತೆಗೆಯುವುದು, ಕೆರೆಯ ಸಮಗ್ರ ಅಭಿವೃದ್ಧಿ, ಎಡ ಮತ್ತು ಬಲದಂಡೆಗಳ ಕಾಲುವೆ ಆಧುನೀಕರಣ, ಕಾಲುವೆಗಳ ಮೇಲ್ಸೇತುವೆಗಳ ನವೀಕರಣಕ್ಕೆ ಒಟ್ಟು 69 ಕೋಟಿ ರೂಪಾಯಿ ಕ್ರಿಯಾಯೋಜನೆ ತಯಾರಿಸಿ ಅನುದಾನ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಮದಗ ಕೆರೆಯ ಬಲ ಮತ್ತು ಎಡ ದಂಡೆಯ ಮೂಲಕ ವಿವಿಧ ಗ್ರಾಮಗಳಿಗೆ ನೀರಾವರಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ಶಾಸಕರೊಂದಿಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಶ್ರೀ ವಿರೂಪಾಕ್ಷ ಸ್ವಾಮೀಜಿ, ನಾಗವಂದ ಹೊರಗಿನಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಅನ್ನಪೂರ್ಣಮ್ಮ ಬಣಕಾರ, ಹಾವೇರಿ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ್ರ ಭರಮಣ್ಣನವರ, ಪಿ.ಡಿ. ಬಸನಗೌಡ್ರ, ಎ.ಕೆ. ಪಾಟೀಲ, ಮಹೇಶ ಗುಬ್ಬಿ, ಪರಮೇಶಪ್ಪ ಕಟ್ಟೇಕಾರ, ನಾಗನಗೌಡ ಕೋಣ್ತಿ, ಬೀರೇಶ ಕರಡೆಣ್ಣನವರ, ನಾರಾಯಣಪ್ಪ ಗೌರಕ್ಕನವರ, ರಮೇಶ ಮಡಿವಾಳರ, ಮಂಜುನಾಥ ತಂಬಾಕದ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ರವೀಂದ್ರ ಮುದಿಯಪ್ಪನವರ, ಯಶವಂತ ಯಡಗೋಡಿ, ವಸಂತ ದ್ಯಾವಕ್ಕಳವರ, ವೀರನಗೌಡ್ರ ಪ್ಯಾಟಿಗೌಡ್ರ, ವಿಜಯ ಅಂಗಡಿ, ರವಿ ಗೌರಕ್ಕನವರ, ಷಣ್ಮುಖಪ್ಪ ಚಳಗೇರಿ, ಹಜರತ್ಅಲಿ ಮುಲ್ಲಾ, ರಷೀದಸಾಬ್ ಕುಪ್ಪೇಲೂರ, ಮದಗ ಮಾಸೂರು ಕೆರೆ ಅಭಿವೃದ್ಧಿ ಹೋರಾಟ ಸಮಿತಿ ಮತ್ತು ಅಕ್ಕಮಹಾದೇವಿ ಸಮಾಜ ಸೇವಾ ಸಂಸ್ಥೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.