ಜಿಲ್ಲೆ

ಹಾರೋಹಳ್ಳಿ ಅಭಿವೃದ್ಧಿಗೆ ಆದ್ಯತೆ

ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ಡೇರಿ ಕಟ್ಟಡ ಉದ್ಘಾಟನೆ

ಹಾರೋಹಳ್ಳಿ : ಜಿಲ್ಲೆಯಲ್ಲಿ ನೂತನವಾಗಿ ತಾಲೂಕಾಗಿರುವ ಹಾರೋಹಳ್ಳಿಯನ್ನು ಮಾದರಿ ತಾಲೂಕನ್ನಾಗಿ ನಿರ್ಮಾಣ ಮಾಡುವುದು ನನ್ನ ಗುರಿಯಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ತಾಲೂಕಿನ ಗಬ್ಬಾಡಿ ಗ್ರಾಮದಲ್ಲಿ ಶನಿವಾರ ನೂತನ ಡೇರಿ ಕಟ್ಟಡವನ್ನು ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಾರೋಹಳ್ಳಿ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಮೂಲ ಸೌಲಭ್ಯ ಹಾಗೂ ವಿವಿಧ ಅಭಿವೃದ್ಧಿಗೆ ಮಾಡುವ ಮೂಲಕ ಮಾದರಿಯ ತಾಲೂಕನ್ನಾಗಿಸಲಾಗುವುದು ಎಂದು ಹೇಳಿದರು.

ಆನೇಕಲ್ ಮತ್ತು ಬಿಡದಿ ರಸ್ತೆಯಲ್ಲಿರುವ ಪಪಂ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಲಾಗಿದ್ದು, ರಸ್ತೆ ವಿಸ್ತರಣೆ ನಡೆಯಲಿದೆ. ಚರಂಡಿ, ರಸ್ತೆ, ಕುಡಿಯುವ ನೀರು ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಎಲ್ಲರೂ ಕೈಜೋಡಿಸಬೇಕು. ಅಧಿಕಾರಿಗಳು ಅವರ ಕರ್ತವ್ಯವನ್ನು ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪವಾಗಲಿ ಇಲ್ಲ. ನಿಯಮಾನುಸಾರ ಅವರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಅಂಗಡಿಯನ್ನು ಕಳೆದುಕೊಂಡ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಆದ್ಯತೆ ಅನುಸಾರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ಆರ್.ಸಿ.ಶಿವಕುಮಾರ್, ಮುಖಂಡರಾದ ಅಶೋಕ್, ಮೋಹನ ಹೊಳ್ಳ, ಎಚ್.ಎಸ್.ಹರೀಶ್ ಕುಮಾರ್, ಜಗದೀಶ್ ಗೌಡ, ಸೋಮಣ್ಣ ಇತರರು ಇದ್ದರು.