ರಬಕವಿ-ಬನಹಟ್ಟಿ ತಾಲೂಕಿನ ಡೆಂಪೊ ಡೈರಿ ಮಾರ್ಗಲ್ಲಿರುವ ಟ್ರೀ ಪಾರ್ಕ್‌ನ್ನು ಶಾಸಕ ಸಿದ್ದು ಸವದಿ ವೀಕ್ಷಿಸಿದರು. ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ಕಾಳಪ್ಪನವರ ಇತರರಿದ್ದರು. 
ಜಿಲ್ಲೆ

ಮಾದರಿ ಉದ್ಯಾನ ನಿರ್ಮಾಣಕ್ಕೆ ಆದ್ಯತೆ - ಸಾಲುಮರದ ತಿಮ್ಮಕ್ಕ ಪಾರ್ಕ್ ಕಾಮಗಾರಿ ಪರಿಶೀಲನೆ

ರಬಕವಿ/ಬನಹಟ್ಟಿ: ತಾಲೂಕು ಉದ್ಯಾನವಾಗಿ ಮಹತ್ವ ಪಡೆದಿರುವ ರಬಕವಿ-ಬನಹಟ್ಟಿ ಡೆಂಪೊ ಡೈರಿ ಮಾರ್ಗದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನ (ಟ್ರೀ ಪಾರ್ಕ್)ದ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಉದ್ಯಾನವನಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿ, 2 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಈಗಾಗಲೇ ಮೊದಲ ಹಂತವಾಗಿ 25 ಲಕ್ಷ ರೂ. ಕಾಮಗಾರಿ ನಡೆದಿದೆ. ಇದೀಗ 24 ಲಕ್ಷ ರೂ. ಹಣ ಬಿಡುಗಡೆಗೊಂಡಿದೆ. ಮಕ್ಕಳಿಗೆ ಪ್ರತ್ಯೇಕ ಉದ್ಯಾನ, ಸಿಮೆಂಟ್ ಮೂರ್ತಿಗಳ ನಿರ್ಮಾಣ ಸೇರಿದಂತೆ ಸಸಿಗಳನ್ನು ನೆಟ್ಟು ಮಾದರಿ ಉದ್ಯಾನ ಮಾಡಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ವಿಶೇಷ ಅನುದಾನದೊಂದಿಗೆ 2 ಎಕರೆ ಜಾಗದಲ್ಲಿ ವಿಶಾಲ ಕೆರೆ ನಿರ್ಮಾಣವಾಗಲಿದೆ. ವಾಯು ವಿಹಾರಿಗಳಿಗೆ ವಿಶ್ರಾಂತಿಗೆಂದು ಖುರ್ಚಿ ಸೇರಿದಂತೆ ಇತರೆ ಸೌಲಭ್ಯ ಒದಗಿಸಲಾಗುವುದು ಎಂದರು.

ವಲಯ ಅರಣ್ಯಾಧಿಕಾರಿ ವಿಜಯಕುಮಾರ ಕಾಳಪ್ಪನವರ, ವಾಸಿಂರಾಜ್ ತೆಣಗಿ, ಮಲ್ಲಿಕಾರ್ಜುನ ನಾವಿ, ಮಹಾವೀರ ಆಲಗೂರ ಇತರರಿದ್ದರು.