ಬಳ್ಳಾರಿ : ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಪ್ರಣಾಳಿಕೆಯಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಪ್ರತಿಯೊಬ್ಬರ ಮನೆಗೆ ಸರ್ಕಾರದ ಯೋಜನೆಗಳು ತಲುಪಿಸುವ ರೀತಿ ಕೆಲಸ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.
ಇಲ್ಲಿನ ವಿಮ್ಸ್ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಎಂಇಆರ್‌ಸಿ ಹಾಗೂ ಡಿಎಂಎಫ್‌ನಡಿಯಲ್ಲಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಜಿಲ್ಲೆಯಲ್ಲಿ ಬೆಳೆ ಪರಿಹಾರವನ್ನು ಮೊದಲ ಹಂತದಲ್ಲಿ 34 ಸಾವಿರ ರೈತರಿಗೆ ತಲಾ 2 ಸಾವಿರ ರೂ. ನಂತೆ ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ. ಅದಕ್ಕಾಗಿ 6.74 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಜಿಲ್ಲೆಯಲ್ಲಿ ಒಟ್ಟು 70 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದ್ದು, ಇನ್ನುಳಿದ ರೈತರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಬೆಳೆ ಹಾನಿಗೆ ಪರಿಹಾರ ಬಂದಿಲ್ಲ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪರಿಹಾರ ನೀಡುವುದರಲ್ಲೂ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದರು.
ಈಗಾಗಲೇ ರಾಜ್ಯ ಬಜೆಟ್ ಪೂರ್ವ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಯೋಜನೆಗಳ ಜಾರಿ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗಿದೆ. ಜೀನ್ಸ್ ಪಾರ್ಕ್ ನಿರ್ಮಾಣ, ವಿಮಾನ ನಿಲ್ದಾಣ, ಹಂಪಿಗೆ ನೇರ ರಸ್ತೆ ಮಾರ್ಗ ಈ ಬಾರಿ ಬಜೆಟ್‌ನಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ. ಅಲ್ಲದೆ ಮುನ್ಸಿಪಲ್ ಮೈದಾನದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಜಿಮ್, 25 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಡಿಗ್ರಿ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಸವದಿ ಬಿಜೆಪಿಗೆ ಸೇರಲ್ಲ
ಜಗದೀಶ ಶೆಟ್ಟರ್ ಬಿಜೆಪಿಗೆ ಹೋಗಿದ್ದು, ಅವರ ನಿರ್ಧಾರ. ನಮ್ಮ ಪಕ್ಷಕ್ಕೆ ಸೇರಿದ ಮೇಲೆ ಅವರನ್ನು ಯಾವುದೇ ರೀತಿ ಕಡೆಗಣಿಸಿಲ್ಲ. ಅವರು ಸೋತಿದರೂ ಎಂಎಲ್ಸಿ ಮಾಡಿದ್ದೇವು. ಯಾವ ರೀತಿಯ ಒತ್ತಡಗಳಿದ್ದವೋ ಗೊತ್ತಿಲ್ಲ. ಆದರೆ ಲಕ್ಷ್ಮಣ ಸವದಿ ಅವರು ಬಿಜೆಪಿಗೆ ಸೇರಲ್ಲ ಎಂದು ಹೇಳಿದ್ದಾರೆ ಎಂದು ಸಚಿವ ನಾಗೇಂದ್ರ ತಿಳಿಸಿದರು.
ಬಳ್ಳಾರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಅದಕ್ಕಾಗಿ ಶೀಘ್ರದಲ್ಲೇ ದಿನಾಂಕ ನಿಗದಿಯಾಗದಲಿದೆ. ಯುವ ಜನೋತ್ಸವದ ಜತೆಗೆ ಬಳ್ಳಾರಿ ಉತ್ಸವವನ್ನು ಮಾಡಲಾಗುವುದು ಎಂದರು.