ಜಿಲ್ಲೆ

ಭಾಗಮಂಡಲ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ

ಮಡಿಕೇರಿ:

ಗಜಗರ್ಭದಂತೆ ಆಗಿರುವ ಭಾಗಮಂಡಲ ಮೇಲ್ಸೇತುವೆ ಕಾಮಗಾರಿಯನ್ನು ಕಾವೇರಿ ಸಂಕ್ರಮಣ ಜಾತ್ರೆಗೂ ಮೊದಲೇ ಉದ್ಘಾಟಿಸಬೇಕು ಎನ್ನುವ ಚಿಂತನೆ ಇರುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ. ನಂ.೧ ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ. ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿ ವರ್ಗವನ್ನೂ ಕರೆದುಕೊಂಡು ಹೋಗಿ ಪರಿಸ್ಥಿತಿಯನ್ನು ಅರ್ಥೈಸಲಾಗಿದೆ. ಇದರ ಜತೆಗೆ ಸ್ಥಗಿತಗೊಂಡಿದ್ದ ಎಲ್ಲಾ ಕಾಮಗಾರಿಗಳನ್ನು ಪುನಾರಂಭಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳು ಮುಗಿಯುವ ಸೂಚನೆ ಕಾಣುತ್ತಿದೆ ಎಂದರು.

ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ಸುಮಾರು ಒಂದೂವರೆ ದಶಕದಿಂದ ಕೊಡಗಿನಲ್ಲಿ ಆನೆ ಮಾನವ ಸಂಘರ್ಷ ತೀವ್ರವಾಗಿದೆ. ಇಂಥ ಸಮಸ್ಯೆ ಬಗೆಹರಿಸುವುದು ಅಷ್ಟು ಸುಲಭ ಅಲ್ಲ. ಆದರೂ ಇದನ್ನು ಸವಾಲಾಗಿ ಸ್ವೀಕರಿಸಲಾಗಿದೆ. ೧ ದಿವಸ, ೧ ಅಥವಾ ೨ ತಿಂಗಳಲ್ಲಿ ಬದಲಾವಣೆ ಆಗುತ್ತದೆ ಎನ್ನುವ ನಿರೀಕ್ಷೆಯೂ ಸರಿಯಲ್ಲ. ೨೦ ವರ್ಷಗಳ ನಿರ್ಲಕ್ಷ್ಯ ಸರಿಪಡಿಸಲು ಅದರದ್ದೇ ಆದ ಪ್ರಕ್ರಿಯೆ ಮತ್ತು ಸಮಯದ ಅಗತ್ಯವಿದೆ. ೨೭ ಆನೆಗಳನ್ನು ತಿತಿಮತಿ ವಲಯದಿಂದ ಈಗಾಗಲೇ ಕಾಡಿಗೆ ಅಟ್ಟಲಾಗಿದೆ. ಆನೆಗಳಿಂದಾಗಿ ಕಾಫಿ, ಭತ್ತ ಬೆಳೆಯಲು ಸಾಧ್ಯವಾಗುತ್ತಿಲ್ಲ. ಪ್ರಾಣಕ್ಕೂ ಹಾನಿ ಆಗುತ್ತಿದೆ. ಆತಂಕ ಮತ್ತು ಭಯದ ವಾತಾವರಣದಲ್ಲೇ ಬದುಕುವ ಸ್ಥಿತಿ ಇದೆ. ಇದು ಬದಲಾಗಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಇನ್ನು ಮುಂದೆಯೂ ನಡೆಯುತ್ತದೆ. ಸರ್ಕಾರದ ಮಟ್ಟದಲ್ಲಿ ೨-೩ ದೊಡ್ಡ ಸಭೆಗಳು ಆಗಿವೆ. ಅರಣ್ಯ ಸಚಿವರಿಂದ ಹಿಡಿದು ಇಲಾಖೆಯ ಎಲ್ಲಾ ದೊಡ್ಡ ದೊಡ್ಡ ಅಧಿಕಾರಿಗಳು ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಇಲ್ಲಿಯ ಸಮಸ್ಯೆಯ ಅರಿವಾಗಿದೆ. ಕೆಲವು ಕ್ರಮಗಳನ್ನು ಈಗಾಗಲೇ ಜರುಗಿಸಲಾಗಿದೆ. ೩೬೦ ಡಿಗ್ರಿ ಕ್ಯಾಮೆರಾ ಸೇರಿದಂತೆ ೪೪ ಕ್ಯಾಮೆರಾಗಳನ್ನು ಅಳವಡಿಸಿ ಆನೆಗಳ ಚಲನವಲನ ಗುರುತಿಸುವ ಕೆಲಸ ನಡೆಯುತ್ತಿದೆ. ಎಸ್‌ಎಂಎಸ್ ಅಲರ್ಟ್, ಬೀದಿಗಳಲ್ಲಿ ಅಳವಡಿಸಿರುವ ಎಲ್‌ಇಡಿ ಅಲರ್ಟ್ ಪುನಾರಂಭಗೊಂಡಿದೆ ಎಂದು ತಿಳಿಸಿದರು.

ಕಸ್ತೂರಿ ರಂಗನ್ ಮತ್ತು ಗಾಡ್ಗಿಳ್ ವರದಿ ಪರಿಣಾಮಕಾರಿಯಾಗಿರುವ ವರದಿಗಳಾಗಿವೆ. ವರದಿ ತಯಾರಿಕೆ ಸಂದರ್ಭ ಕೇತ್ರಕಾರ್ಯ ನಡೆದಿಲ್ಲ. ವಾಸ್ತವವನ್ನು ತಳಮಟ್ಟದಲ್ಲಿ ಬಂದು ನೋಡಿಲ್ಲ. ವರದಿಯ ಉದ್ದೇಶ ಏನೇ ಇದ್ದರೂ, ಕೊಡಗು ಮತ್ತು ಪಶ್ಚಿಮಘಟ್ಟದ ರಕ್ಷಣೆಗೆ ಬದ್ಧವಾಗಿ ಕೆಲಸ ಮಾಡಬೇಕು. ಇಲ್ಲಿಯ ಪರಿಸರ, ವಾತಾವರಣ ರಕ್ಷಣೆ ಮಾಡಲೇ ಬೇಕು. ಪರಿಸರ ಸೂಕ್ಷ್ಮ ಮತ್ತು ಜೀವವೈವಿಧ್ಯತೆಯ ತಾಣ ಇದು. ಇದನ್ನು ರಕ್ಷಿಸದಿದ್ದರೆ ದಕ್ಷಿಣ ಭಾರತಕ್ಕೇ ಉಳಿಗಾಲ ಇಲ್ಲ. ಆದರೆ ಇದೇ ಸಂದರ್ಭದಲ್ಲಿ ಜನರ ಜೀವನವೂ ಅಸ್ತವ್ಯಸ್ತ ಆಗಲು ಬಿಡುವುದಿಲ್ಲ. ಇದೆರಡನ್ನೂ ಸಮತೋಲನದಿಂದ ತೆಗೆದುಕೊಂಡು ಹೋಗುವ ಕೆಲಸ ಆಗಬೇಕು. ಕೃಷಿ ಚಟುವಟಿಕೆಗಳಿಗಾಗಿ ಕೆರೆ ತೆಗೆಯಬೇಕಾಗಬಹುದು, ಮರ ಕಡಿಯಬೇಕಾಗಬಹುದು, ಕಾಫಿ ತೋಟ ಮಾಡಬೇಕಾಗುತ್ತದೆ. ಇದೆಲ್ಲದ್ದಕ್ಕೂ ಅಡ್ಡ ಆಗುವ ರೀತಿಯ ಅಂಶಗಳು ಕಸ್ತೂರಿ ರಂಗನ್ ವರದಿಯಲ್ಲಿದೆ. ಇದನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೋಣಿಕೊಪ್ಪ, ಅರ‌್ವತ್ತೋಕ್ಲು, ಪೊನ್ನಂಪೇಟೆ ಸೇರಿಸಿ ಪುರಸಭೆ ಮಾಡಬೇಕು ಎನ್ನುವ ಚಿಂತನೆ ಇದೆ. ಇದು ಎಷ್ಟರ ಮಟ್ಟಿಗೆ ಸಾಧ್ಯ ಆಗುತ್ತದೆ ಎನ್ನುವ ಪರಿಶೀಲನೆ ನಡೆದಿದೆ. ಜಿಲ್ಲಾಧಿಕಾರಿ ಮಟ್ಟದಲ್ಲಿ ಚರ್ಚೆಯನ್ನೂ ಮಾಡಲಾಗಿದೆ. ಆದಷ್ಟು ಶೀಘ್ರ ಕಾರ್ಯರೂಪಕ್ಕೆ ತರಲು ಪ್ರಯತ್ನ ನಡೆಸಲಾಗುತ್ತದೆ. ಪೊನ್ನಂಪೇಟೆ ತಾಲೂಕು ಕಚೇರಿ ಸಂಪೂರ್ಣ ವರ್ಗಾ ಆಗಿ ಕಂದಾಯ ಕಚೇರಿ ಉದ್ಘಾಟನೆ ಮಾಡಲಾಗಿದೆ. ತಾಲೂಕುಸೌಧಕ್ಕಾಗಿ ಡಿಪಿಆರ್ ಆಗಿದೆ. ಇದಕ್ಕಾಗಿ ೧೦ ಕೋಟಿ ರೂ. ಪ್ರಸ್ತಾಪವನ್ನು ಕಂದಾಯ ಸಚಿವರಿಗೆ ನೀಡಲಾಗಿದೆ. ಈ ವರ್ಷ ಅಥವಾ ಮುಂದಿನ ವರ್ಷ ಖಂಡಿತವಾಗಿ ಅನುದಾನದ ಭರವಸೆ ನೀಡಿದ್ದಾರೆ. ಹೊಸ ತಾಲೂಕಿಗೆ ಪದವಿ ಕಾಲೇಜು ಆಗಬೇಕು ಎನ್ನುವ ಬಗ್ಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಆಗಿ, ವರದಿಯೂ ತಯಾರಾಗಿದೆ. ಮುಂದಿನ ವರ್ಷಕ್ಕೆ ತಾತ್ಕಾಲಿಕವಾಗಿ ತರಗತಿಗಳು ಆರಂಭವಾಗುತ್ತದೆ. ಮೊದಲೆಲ್ಲಾ ಇದಕ್ಕೆ ಖಾಸಗಿ ಕಾಲೇಜುಗಳು ಅಡಚಣೆ ಮಾಡಿದ್ದವು. ಈಗ ಹಾಗೆ ಆಗಲು ಬಿಡುವುದಿಲ್ಲ. ಈ ಬಾರಿ ಕಾಲೇಜು ಶುರು ಮಾಡುತ್ತೇವೆ. ಪೊನ್ನಂಪೇಟೆಯಲ್ಲಿ ಎಡಿಎಲ್‌ಆರ್ ಕಚೇರಿ ಆರಂಭ ಆಗಬೇಕು. ಹುದ್ದೆಯೂ ಸೃಷ್ಟಿ ಆಗಬೇಕು. ಈ ಬಗ್ಗೆ ಕಂದಾಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗಿನಲ್ಲಿ ಪ್ರವಾಸೋದ್ಯಮ ಮತ್ತು ಪರಿಸರ ಎನ್ನುವ ವಿಷಯ ಬಂದಾಗ ಪರಿಸರಕ್ಕೆ ಆದ್ಯತೆ ಕೊಡಲಾಗುವುದು. ಪರಿಸರಕ್ಕೆ ಹಾನಿ ಆಗುವ ಪ್ರವಾಸೋದ್ಯಮಕ್ಕೆ ಆದ್ಯತೆ ಇಲ್ಲ. ಈ ಸಂಬಂದ ಜಿಲ್ಲಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪರಿಸರಕ್ಕೆ ಹಾನಿಯಾಗುವ ಪ್ರವಾಸೋದ್ಯಮಕ್ಕೆ ಅನುಮತಿ ನೀಡಬಾರದು ಎಂದು ಸೂಚಿಸಲಾಗಿದೆ. ದಸರಾ ಮತ್ತು ಕಾವೇರಿ ಸಂಕ್ರಮಣ ಆಚರಣೆ ಚೆನ್ನಾಗಿ ಆಗಬೇಕು ಎನ್ನುವ ಕಾರಣಕ್ಕೆ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಬೇಡಿಕೆ ಇಡಲಾಗಿದೆ. ಕೇರಳಕ್ಕೆ ಗೋಮಾಂಸ ಸಾಗಾಟದಂತಹ ಅಕ್ರಮ ಚಟುವಟಿಕೆಗಳು, ಗಡಿಪ್ರದೇಶದಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಒಂದು ಒಳ್ಳೆಯ ವಾತಾವರಣ ನಿರ್ಮಾಣ ಮಾಡಲಾಗಿದೆ. ಕೊಡಗಿನಲ್ಲಿ ವಿದ್ಯುತ್ ಸಮಸ್ಯೆ ಇದ್ದು, ೪ ಉಪಕೇಂದ್ರ ಮಂಜೂರು ಮಾಡಿಸಲಾಗಿದೆ. ಜಾಗ ಗುರುತಿಸಿದ ತಕ್ಷಣ ಕೇಂದ್ರದ ಕೆಲಸ ಆರಂಭವಾಗಿ ಇನ್ನು ೧-೧.೫ ವರ್ಷಕ್ಕೆ ಇಲ್ಲಿಯ ವಿದ್ಯುಚ್ಯಕ್ತಿ ಸಮಸ್ಯೆ ಬಗೆಹರಿಯುತ್ತದೆ. ಭಾವನಾತ್ಮಕವಾಗಿ, ಧರ್ಮಾಧಾರಿತವಾಗಿ ಜನರ ಭಾವನೆ ಜತೆ ಚೆಲ್ಲಾಟ ಆಡುವ ರಾಜಕೀಯ ನಡೆಯುತ್ತಿತ್ತು. ಅಭಿವೃದ್ಧಿ ಕಡೆ ಗಮನವೇ ಹರಿಸಿಲ್ಲ. ಅದು ಈಗ ಬದಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಕೊಡಗಿನ ಅಭ್ಯರ್ಥಿಗೆ ಅವಕಾಶ ಕೊಡಬೇಕು ಎನ್ನುವ ಬೇಡಿಕೆಯಲ್ಲಿ ಯಾವುದೇ ತಪ್ಪು ಇಲ್ಲ. ಕೊಡಗು ಪಾರ್ಲಿಮೆಂಟ್ ಕ್ಷೇತ್ರ, ರಾಜ್ಯಸಭಾ ಸೀಟ್ ಕಲೆದುಕೊಂಡಿದೆ. ಹಾಗಾಗಿ ಲೋಕಸಭೆಯಲ್ಲಿ ಕೊಡಗನ್ನು ಪ್ರತಿನಿಧಿಸುವವರು ಯಾರೂ ಇಲ್ಲ. ಜನಸಂಖ್ಯೆ ಕಡಿಮೆ ಮತ್ತು ಎರಡೇ ಕ್ಷೇತ್ರ ಇಲ್ಲಿರುವುದು ಎನ್ನುವ ಕಾರಣಕ್ಕೆ ಬಹುಶಃ ಯಾರೂ ಕೊಡಗನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದರೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಜನಸಂಖ್ಯೆ ಮಾತ್ರ ಆಧಾರ ಆಗಲು ಸಾಧ್ಯವಿಲ್ಲ. ಸಂಸದೀಯ ಪ್ರಜಾಪ್ರಭುತ್ವ ಎಂದರೆ ಪ್ರಾತಿನಿಧಿಕ ಪ್ರಜಾಪ್ರಭುತ್ವ. ಎಲ್ಲರಿಗೂ ಪ್ರತಿನಿಧಿಸುವ ಅವಕಾಶ ಕೊಡಬೇಕು. ಹಾಗಾಗಿ ಕೊಡಗು ಜಿಲ್ಲೆಯವರಿಗೂ ತಮ್ಮ ಕ್ಷೇತ್ರ ಪ್ರತಿನಿಧಿಸುವ ಅವಕಾಶ ಲೋಕಸಭೆಯಲ್ಲಿ ಸಿಗಲೇಬೇಕು. ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ಇದಕ್ಕೆ ಸ್ಪಂದಿಸಬೇಕು ಎನ್ನುವುದು ಕಾದು ನೋಡಬೇಕಿದೆ ಎಂದರಲ್ಲದೆ, ತಾನು ಲೋಕಸಭಾ ಟಿಕೆಟ್ ಬಯಸುತ್ತಿಲ್ಲ. ಆದರೆ ಪಕ್ಷ ಕೊಟ್ಟಿರುವ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಬದ್ಧತೆಯಿಂದ ನಿಭಾಯಿಸಿಕೊಂಡು ಬರಲಾಗಿದೆ. ಹಾಗಾಗಿ ಪಕ್ಷದ ಹೇಳಿದಂತೆ ಕೇಳುತ್ತೇನೆ ಎಂದರು.

ಕಾವೇರಿ ಸಮಸ್ಯೆಗೆ ಉತ್ತಮ ಮಳೆಯಾಗುವುದೊಂದೇ ಸದ್ಯದ ಪರಿಹಾರ ಎಂದ ಪೊನ್ನಣ್ಣ ಕೋರ್ಟ್ ತೀರ್ಪು ಪ್ರಕಾರ ಸುಮಾರು ೧೭೭ ಟಿಎಂಸಿ ನೀರು ತಮಿಳುನಾಡಿಗೆ ಬಿಡುಗಡೆ ಮಾಡಬೇಕು. ಆದರೆ ಸಂಕಷ್ಟದ ಸ್ಥಿತಿಯಲ್ಲಿ ಎಷ್ಟು ನೀರು ಬಿಡಬೇಕು ಎನ್ನುವುದರ ಬಗ್ಗೆ ನಿರ್ದಿಷ್ಟ ಮಾನದಂಡ ಇಲ್ಲ. ಈ ಅವಧಿಯಲ್ಲಿ ಬಿಡುಗಡೆ ಮಾಡಬೇಕಿದ್ದ ೧೦೦ ಟಿಎಂಸಿ ಬದಲು ೩೭ ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಹಾಗಾಗಿ ಕರ್ನಾಟಕದ ಹಿತ ಕಾಪಾಡಲಿಲ್ಲ ಎನ್ನುವ ಆರೋಪ ಯಾರೂ ಮಾಡಲು ಸಾಧ್ಯವಿಲ್ಲ. ತೀರ್ಪಿನ ವಿರುದ್ಧ ಸರ್ಕಾರ ನಿರ್ಧಾರ ತೆಗೆದುಕೊಂಡಿಲ್ಲ. ನೀರು ಬಿಡುವುದಿಲ್ಲ ಎಂದೂ ಹೇಳಿಲ್ಲ. ನಮ್ಮಲ್ಲಿ ನೀರಿಲ್ಲ ಎಂದಷ್ಟೇ ಹೇಳಲಾಗಿದೆ. ಕೋರ್ಟ್ ಮತ್ತು ನ್ಯಾಯಾಧೀಕರಣದ ಮುಂದೆಯೂ ಇದೇ ಕರ್ನಾಟಕದ ನಿಲುವಾಗಿದೆ. ಮತ್ತೆ ೫ ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ನಿಯಂತ್ರಣ ಆಯೋಗ ತೀರ್ಪು ಕೊಟ್ಟರೆ ಸುಪ್ರೀಂಕೋರ್ಟ್‌ಗೆ ಹೋಗಲಾಗುವುದು. ಪ್ರಧಾನಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಅಭಿಪ್ರಾಯಪಟ್ಟರು.

ಲೈನ್‌ಮನೆ ಮತ್ತು ಅರಣ್ಯ ಪ್ರದೇಶದಲ್ಲಿ ಇರುವ ೪ ಸಾವಿರ ಮಂದಿಗೆ ಪುನರ್ವಸತಿಗೋಸ್ಕರ ೪ ಸಾವಿರ ಮನೆ ಬೇಕು ಎನ್ನುವ ಅಂಕಿ ಅಂಶ ಇದೆ. ಇದಕ್ಕೆ ಸುಮಾರು ೩೦ ಎಕರೆ ಜಾಗಬೇಕು. ಎಲ್ಲಾ ಸರ್ಕಾರಿ ಮತ್ತು ಪೈಸಾರಿ ಜಾಗ ಒತ್ತುವರಿ ಆಗಿದೆ. ಜಾಗ ಗುರುತಿಸುವ ಕೆಲಸವಂತೂ ಈಗಾಗಲೇ ನಡೆದಿದೆ. ಜಿಲ್ಲಾಧಿಕಾರಿ, ಸಿಇಒಗಳ ಸಭೆಯಲ್ಲೂ ಮುಖ್ಯಮಂತ್ರಿ ಇದನ್ನೇ ಹೇಳಿದ್ದಾರೆ. ಶೀಘ್ರದಲ್ಲೇ ಸರ್ಕಾರಿ ಜಮೀನು ಎಷ್ಟಿದೆ. ಇದರಲ್ಲಿ ಎಷ್ಟು ಉಪಯೋಗ ಮಾಡಬಹುದು ಎನ್ನುವ ಮಾಹಿತಿ ಸಿಗಲಿದೆ. ಕ್ರೀಡಾಂಗಣ, ಸ್ಮಶಾನ, ಪುನರ್ವಸತಿ, ಆಸ್ಪತ್ರೆ, ಮೂಲಸೌಲಭ್ಯ, ವಿದ್ಯುತ್ ಉಪಕೇಂದ್ರ, ಹೀಗೆ ಹಲವು ಸೌಲಭ್ಯಗಳಿಗೆ ಜಾಗದ ಕೊರತೆ ಇದೆ ಎಂದರು.

ಅಧಿಕಾರಿ ವಲಯದಲ್ಲಿ ಇರುವ ಭ್ರಷ್ಟ ವ್ಯವಸ್ಥೆ ಸಂಪೂರ್ಣ ಇಲ್ಲದಂತೆ ಮಾಡಲು ಸಮಯ ಹಿಡಿಯಬಹುದು. ಆದರೂ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ. ಮಧ್ಯವರ್ತಿಗಳ ಹಾವಳಿ, ಲಂಚದ ಪಿಡುಗಿಗೆ ಅಂತ್ಯ ಹಾಡಲು ಒಂದು ಹಂತದಲ್ಲಿ ಯಶಸ್ವಿ ಕಾಣಲಾಗಿದೆ. ಭ್ರಷ್ಟ ಅಧಿಕಾರಿಗಳ ಅಮಾನತ್ತು, ಅವರ ವಿರುದ್ಧ ಪ್ರಕರಣ ದಾಖಲು ಆಗುತ್ತಿರುವುದರಿಂದ ತಾವು ಮುಂದೆ ತೊಂದರೆಗೆ ಒಳಗಾಗುತ್ತೇವೆ ಎನ್ನುವ ಭಯ ಭ್ರಷ್ಟಾಚಾರಿಗಳಲ್ಲಿ ಈಗ ಇದೆ. ಪೊನ್ನಂಪೇಟೆ ತಾಲೂಕಿನಲ್ಲಿ ಬರಕ್ಕೆ ಸಂಬಂಧಿಸಿದ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಬರಪೀಡಿ ಪ್ರದೇಶ ಆಗಲು ಬೇಕಾದ ಎಲ್ಲಾ ಮಾನದಂಡಗಳೂ ಪೊನ್ನಂಪೇಟೆ ಹೊಂದಿದೆ. ಸರ್ಕಾರದ ಹಂತದಲ್ಲಿ ಕ್ಯಾಬಿನೆಟ್ ಉಪಸಮಿತಿ ಸಭೆಯಲ್ಲಿ ಅದು ತೀರ್ಮಾನ ಆಗಬೇಕು. ಇದು ಮುಂದಿನ ದಿನಗಳಲ್ಲಿ ಆಗುತ್ತದೆ ಎಂದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕಂದಾಯ ನಿಗದಿ, ಪಟ್ಟೆದಾರನ ಹೆಸರು ತೆಗೆಯುವುದು, ಪೌತಿ ಖಾತೆ, ದುರಸ್ತಿ, ಪಿ ನಂಬರ್ ತೆಗೆಯುವ ಕೆಲಸ ಆಗಬೇಕಿದೆ. ಕಂದಾಯ ನಿಗದಿಗೆ ೧ ಲಕ್ಷ ಎಕರೆ ಜಾಗ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಈಗ ೫ ತಾಲೂಕುಗಳ ೫ ಗ್ರಾಮಗಳಲ್ಲಿ ಪೈಲಟ್ ಕಾರ್ಯಕ್ರಮ ಶುರುಮಾಡಲಾಗಿದೆ. ಇದು ಯಶಸ್ವಿ ಆದರೆ ಇಡೀ ಜಿಲ್ಲೆಯಲ್ಲಿ ಕಂದಾಯ ನಿಗದಿ ಮಾಡುವ ಕೆಲಸ ಮಾಡಲಾಗುವುದು. ಕಂದಾಯ ಸಮಸ್ಯೆಗಳಿಗೆ ಸಂಬಂಧಿಸಿದ ಹಾಗೆ ಒಂದು ಬ್ಲೂಪ್ರಿಂಟ್ ತಯಾರಿಸಲಾಗುತ್ತಿದೆ. ಇದು ಪೂರ್ಣಗೊಂಡ ನಂತರ ಕಂದಾಯ ಸಚಿವರನ್ನು ಇಲ್ಲಿಗೆ ಕರೆಸಿ ಕಂದಾಯ ಅದಾಲತ್ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಲಾಗುವುದು ಎಂದರು.

ವಕೀಲ ವೃತ್ತಿ ಬಿಟ್ಟಿದ್ದು ಆರ್ಥಿಕವಾಗಿ ದೊಡ್ಡ ಹಿನ್ನಡೆ ಆದರೆ ರಾಜಕೀಯದಲ್ಲಿ ಸಿಗುವ ಸಾರ್ಥಕತೆ ಬಹಳ ಹೆಚ್ಚು. ಇಲ್ಲಿ ನೇರವಾಗಿ ಜನರೊಂದಿಗೆ ಸಂಪರ್ಕ ಬೆಳೆಸಬಹುದು. ಅವರ ಸಮಸ್ಯೆ ಆಲಿಸಬಹುದು. ಜನಸಾಮಾನ್ಯರಲ್ಲಿ ಒಂದಾಗುವ ತೃಪ್ತಿ, ಮಾನವೀಯತೆಯ ಸ್ಪರ್ಶ ಸಿಗುತ್ತದೆ. ವ್ಯಯಕ್ತಿಕವಾಗಿ ಬೆಳೆಯಲೂ ಇದೊಂದು ದೊಡ್ಡ ಭೂಮಿಕೆ. ವಕೀಲನಾಗಿ ಬರೀ ಕೋರ್ಟ್, ಕಚೇರಿ, ಕಾನೂ ಅಷ್ಟೇ ಇರುತ್ತದೆ. ಇಲ್ಲಿ ಅದರ ಜತೆಗೆ ಶಾಸನ ಸಭೆ ಇದೆ, ಜನರ ಸಮಸ್ಯೆ ಇದೆ. ಆಡಳಿತದ ಒಂದು ಅನುಭವ ಆಗುತ್ತದೆ. ಸಚಿವ ಸ್ಥಾನ ಬಯಸಿರಲಿಲ್ಲ. ಈ ಬಗ್ಗೆ ಬೇಡಿಕೆಯನ್ನೂ ಇಟ್ಟಿರಲಿಲ್ಲ. ಆದರೆ ಈಗ ಇಬ್ಬರು ಕಾಂಗ್ರೆಸ್ ಶಾಸಕರನ್ನು ಜಿಲ್ಲೆಯಿಂದ ಆಯ್ಕೆ ಮಾಡಿದ್ದು, ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡುವ ಮೂಲಕ ಹಿಂದಿನ ಅನ್ಯಾಯಗಳನ್ನು ಸರಿಪಡಿಸಬೇಕು ಎನ್ನುವ ಬೇಡಿಕೆ ಇಡಲಾಗಿತ್ತು ಎಂದು ಮನದಾಳ ಹಂಚಿಕೊಂಡರು. ಈ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೊಂದು ಸಚಿವ ಸ್ಥಾನದ ಬೇಡಿಕೆ ಈಡೇರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.