ಜಿಲ್ಲೆ

ಕಸತ್ಯಾಜ್ಯ ವಿಲೇವಾರಿಗೆ ಆದ್ಯತೆ ಕೊಡಲಿ

ಬಸವರಾಜ ವೀರಪ್ಪ ಗರಗ

ಕುಮಟಾ: ನಮ್ಮ ಹಿರಿಯ ತಲೆಮಾರಿನವರು ಅರಣ್ಯ ಸಂಪತ್ತಿನ ಮಹತ್ವವರಿತು ಅರಣ್ಯ ಪಂಚಾಯಿತಿಯನ್ನು ಸ್ಥಾಪಿಸಿ ಪೀಳಿಗೆಯಿಂದ ಪೀಳಿಗೆಗೆ ಹಸಿರು ಉಳಿಸಿ ಬೆಳೆಸಿದ್ದರಿಂದ ಇಂದು ಹಳಕಾರ ಅರಣ್ಯ ಪಂಚಾಯಿತಿ ಶತಮಾನೋತ್ಸವ ಆಚರಿಸಲು ಸಾಧ್ಯವಾಗಿದೆ. ಹಳಕಾರಿನ ಜನ ನಿಜಕ್ಕೂ ಅಭಿನಂದನೀಯರು ಎಂದು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

ಹಳಕಾರದಲ್ಲಿ ಗ್ರಾಮ ಅರಣ್ಯ ಪಂಚಾಯಿತಿ ಸ್ಥಾಪನೆಗೊಂಡ ಶತಮಾನೋತ್ಸವ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾನ್ಯವಾಗಿ ಸ್ವಂತಕ್ಕಾಗಿ ಏನನ್ನಾದರೂ ಸಂರಕ್ಷಿಸಿ ಇಟ್ಟುಕೊಳ್ಳುವುದು ವಾಡಿಕೆ, ಆದರೆ, ಹಳಕಾರದ ಜನ ಇಡೀ ಊರಿಗಾಗಿ ಅರಣ್ಯವನ್ನು ಉಳಿಸಿಕೊಂಡು, ಅದರ ಮೇಲೆ ತಮ್ಮ ಹಕ್ಕನ್ನೂ ಕಾಪಿಟ್ಟುಕೊಂಡಿರುವುದು ವಿಶೇಷ. ಇದು ದೇಶಕ್ಕೆ ಮಾದರಿ. ಈ ಅರಣ್ಯದಲ್ಲಿ ಸಾಧ್ಯವಾದಷ್ಟು ಹಣ್ಣು-ಹಂಪಲು ಮರ ಬೆಳೆಸಿ, ಜನರಿಗೆ ಪ್ರಯೋಜನವಾಗುವ ಪ್ರಕೃತಿಯಾಗಲಿ, ಕಸತ್ಯಾಜ್ಯ ವಿಲೇವಾರಿಗೆ ಆದ್ಯತೆ ಕೊಡಿ, ಅಕೇಶಿಯಾದಂತಹ ಮರಗಳನ್ನು ಸಂಪೂರ್ಣ ಕಡಿಮೆ ಮಾಡಿ, ಪೂರಕವಾಗಿ ನಮ್ಮೆಲ್ಲರ ಸಹಕಾರ ಇರಲಿದೆ ಎಂದರು.

ಅರಣ್ಯ ಪಂಚಾಯಿತಿಯ ಮುಖ್ಯ ಕಮಾನು ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ದೇಶದ ಏಕೈಕ ಜನಾರಣ್ಯವಾಗಿರುವ ಹಳಕಾರ ಅರಣ್ಯ ಪಂಚಾಯಿತಿ ನಮಗೆ ಹೆಮ್ಮೆ. ಇದು ಈ ಭಾಗದ ಪ್ರಾಕೃತಿಕ ವೈಭವ ಮತ್ತು ಪರಿಸರ ಉಳಿವಿಗೆ ಮಹತ್ವಪೂರ್ಣ ಪಾತ್ರ ವಹಿಸಿದೆ. ಮುಂದಿನ ಪೀಳಿಗೆಗೂ ಮಾದರಿಯಾಗಿ ಜನರ ಹಸಿರನ್ನೇ ಉಸಿರಾಗಿಸಿಕೊಂಡ ಇತಿಹಾಸ ಪ್ರೇರಣೆಯಾಗಲಿದೆ. ಹಸಿರನ್ನು ತನ್ನದೇ ಮಾರ್ಗದಲ್ಲಿ ಆರಾಧಿಸಿದ ವೃಕ್ಷಮಾತೆ ತುಳಸಿಗೌಡ ಪದ್ಮಶ್ರೀಯಂತಹ ಉನ್ನತ ಗೌರವಕ್ಕೆ ಪಾತ್ರರಾಗಿ ಸ್ಮರಣೀಯರಾಗಿದ್ದಾರೆ. ಹಾಗೆಯೇ ಹಳಕಾರ ಗ್ರಾಮವೂ ಅರಣ್ಯ ಸಂರಕ್ಷಣೆಯ ಕಾರ್ಯದಲ್ಲಿ ಎಲ್ಲ ಗೌರವಕ್ಕೆ ಅರ್ಹರು ಎಂದರು.

ಮುಖ್ಯ ಅತಿಥಿಯಾಗಿ ಕೇಶವ ಶಂಭು ಭಟ್, ಅರಣ್ಯ ಪಂಚಾಯಿತಿ ಅಧ್ಯಕ್ಷ ನಾಗರಾಜ ಭಟ್, ಹೊಲನಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಹೆಗಡೆ, ಗಜಾನನ ಎಸ್. ಗುನಗ, ಅನಿಲ ಮಡಿವಾಳ, ಮಾದೇವಿ ಮುಕ್ರಿ, ಸಾವಿತ್ರಿ ಪಟಗಾರ, ಪರಿಸರ ವಿಜ್ಞಾನಿ ಡಾ.ಎಂ.ಡಿ. ಸುಭಾಸ ಚಂದ್ರನ್, ಪೊ›.ಎಂ.ಜಿ. ನಾಯ್ಕ, ಶಾಂತಾರಾಮ ಹರಿಕಂತ್ರ, ಇತರರಿದ್ದರು.