Prioritize sustainable farming 
ಜಿಲ್ಲೆ

ಸುಸ್ಥಿರ ಬೇಸಾಯಕ್ಕೆ ಆದ್ಯತೆ ನೀಡಿ

Vijayapura - Desk - Doddanagouda Gudihindin

ಜಮಖಂಡಿ: ರೈತರು ಸಾವಯವ ಕೃಷಿಯ ಕುರಿತು ತಿಳಿದುಕೊಳ್ಳಬೇಕು ಎಂದು ಶ್ರೀಮಠದ ಗುರುಪಾದ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ಕೃಷಿ ಇಲಾಖೆ, ಜಮಖಂಡಿ, ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ಪದ್ಧತಿ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇಸಾಯ ವೆಚ್ಚ ಕಡಿಮೆ ಮಾಡಿ ಆರೋಗ್ಯಯುತ ಆಹಾರ ಮತ್ತು ಸುಸ್ಥಿರ ಆದಾಯ ಪಡೆದುಕೊಳ್ಳಬೇಕೆಂದು ತಿಳಿಸಿದರು.

ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬಿ. ಬೆಳ್ಳಿ ಮಾತನಾಡಿ, ಹೆಚ್ಚು ರಾಸಾಯನಿಕಗಳ ಬಳಕೆ ಮಾಡುತ್ತಿರುವುದರಿಂದ ಭೂಮಿಯು ಲವತ್ತತೆ ಕಳೆದುಕೊಳ್ಳುತ್ತಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಸುಸ್ಥಿರ ಇಳುವರಿ ಪಡೆದುಕೊಳ್ಳುವಂತೆ ಆಗಬೇಕು. ಎರೆಹುಳುಗೊಬ್ಬರ, ಜೈವಿಕಗೊಬ್ಬರಗಳು ಹಾಗೂ ಹಸಿರೆಲೆಗೊಬ್ಬರಗಳ ಬಳಕೆ ಹೆಚ್ಚಾಗಬೇಕೆಂದು ತಿಳಿಸಿದರು.

ನಿಪ್ಪಾಣಿಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಸಂಜಯ ಪಾಟೀಲ ಮಾತನಾಡಿ, ನಾಟಿ ಮಾಡುವ 8-9 ತಿಂಗಳುಳ್ಳ ಕಬ್ಬನ್ನು ಆಯ್ಕೆ ಮಾಡಿ ತುಂಡು ಬೀಜೋಪಚಾರ ಮಾಡಿ ನಾಟಿ ಮಾಡಬೇಕು ಎಂದರು.

ಮಹಾಲಿಂಗಪೂರದ ರೋಹಿಣಿ ಸಂಸ್ಥೆಯ ಸಂಸ್ಥಾಪಕ ಡಾ. ಮಲ್ಲಪ್ಪ ಕಟ್ಟಿ, ಗೋಕಾಕ ತಾಲೂಕಿನ ಕಲ್ಲೊಳ್ಳಿ ಗ್ರಾಮದ ಸಾವಯವ ಕಷಿಕ ಕಷಿ ಪಂಡಿತ ರಮೇಶ ಖನಗೌಡರ ಮಾತನಾಡಿದರು.

ಪರಗೌಡ ಶೇಗುಣಸಿ, ಗಿರೀಶ ದಾನಗೊಂಡ, ಡಾ.ಭರತ ಶೇಗುಣಸಿ, ವಾಸುದೇವ ಶಿಂಧೆ, ರಾಜೇಶ್ವರಿ ಕೋಟ್ಯಾಗೋಳ, ಈಶ್ವರ ಕರಬಸನವರ, ಮುತ್ತು ಕೋಟಿಮನಿ ಅವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.

ಕೃಷಿ ಅಧಿಕಾರಿಗಳಾದ ಶಂಕರ ಪವಾರ, ರಾಜಕುಮಾರ ಕುಂಚನೂರ, ಎಂ.ಎಸ್. ಬುಜರುಖ್ ಉಪಸ್ಥಿತರಿದ್ದರು. ಸಂಗನಗೌಡ ಪಾಟೀಲ ನಿರೂಪಿಸಿದರು. ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಕೆ.ಎ. ಜಮಖಂಡಿ ವಂದಿಸಿದರು.