ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಗ್ರ ಪೋಷಕಾಂಶ ತರಬೇತಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಡಾ.ಎಂ.ಜೆ.ಚಂದ್ರೇಗೌಡ, ವಿಜ್ಞಾನಿ ಐ.ಸಿ.ಎ.ಆರ್-ಅಟಾರಿ ಇತರರು ಇದ್ದರು. 
ಜಿಲ್ಲೆ

ಮಣ್ಣಿನ ಫಲವತ್ತತೆ, ಆರೋಗ್ಯಕ್ಕೆ ಆದ್ಯತೆ ನೀಡಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಪಿ.ವೀರನಾಗಪ್ಪ ಸಲಹೆ

ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತು 15 ದಿನಗಳ ತರಬೇತಿ ನಡೆಯಿತು.

25 ಉಪನ್ಯಾಸಗಳು ಹಾಗೂ ಜೈವಿಕ ಗೊಬ್ಬರಗಳ ಉತ್ಪಾದನೆ ಘಟಕ ಮತ್ತು ಮೂಡಿಗೆರೆಯಲ್ಲಿನ ತೋಟಗಾರಿಕೆ ಮಹಾವಿದ್ಯಾಲಯದ ವಿವಿಧ ವಿಭಾಗಗಳು, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಿಂದ ವಿವಿಧ ಪೋಷಕಾಂಶಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.

ವಿವಿಧ ರೀತಿಯ ಗೊಬ್ಬರ ಉತ್ಪಾದನೆ ಘಟಕಗಳು ಹಾಗೂ ಗೊಬ್ಬರ ಕಲಬೆರಕೆ, ಮಣ್ಣು ಪರೀಕ್ಷೆಯ ಬಗ್ಗೆಯೂ ವಿವರಿಸಲಾಯಿತು. 15 ಮಂದಿ ಸಂಪನ್ಮೂಲ ವ್ಯಕ್ತಿಗಳು 15 ದಿನಗಳವರೆಗೆ ಬೆಳೆಗಳ ಉತ್ಪಾದನೆಯಲ್ಲಿ ಸಮಗ್ರ ಪೋಷಕಾಂಶಗಳ ಮಹತ್ವ, ಕೊರತೆ ಲಕ್ಷಣಗಳು, ಮಣ್ಣು ಪರೀಕ್ಷೆ ಹಾಗೂ ಬೆಳೆ ಸ್ಪಂದನೆ ಪ್ರಯೋಜನೆ, ರಸಗೊಬ್ಬರ ನಿಯಂತ್ರಣ ಕಾಯ್ದೆಯ ಉದ್ದೇಶಗಳು ಕುರಿತು ವಿವಿಧ ಉಪನ್ಯಾಸ ನೀಡಿದರು. ಕರ್ನಾಟಕದ ಕೃಷಿ ಪರಿಚಯ, ಮಣ್ಣಿನ ಉತ್ಪತ್ತಿ, ಮಣ್ಣಿನ ಪಾರ್ಶ್ವ ದೃಶ್ಯ, ಪದರಗಳು, ಮಣ್ಣಿನ ಜೈವಿಕ ಬೌತಿಕ ಹಾಗೂ ರಾಸಾಯನಿಕ ಗುಣಗಳು

ಕರ್ನಾಟಕದ ವಿವಿಧ ರೀತಿಯ ಮಣ್ಣುಗಳು, ಕೃಷಿ ಬೆಳೆಗಳಲ್ಲಿ ಪೋಷಕಾಂಶಗಳ ಪಾತ್ರ ಪೋಷಕಾಂಶವನ್ನು ಪೂರೈಕೆ ಮಾಡಲು ಬೇಕಾಗುವ ಎಲ್ಲ ರೀತಿಯ ಸಾವಯವ ಗೊಬ್ಬರಗಳು, ರಾಸಾಯನಿಕ ಗೊಬ್ಬರಗಳು ಹಾಗೂ ರಾಸಾಯನಿಕ ಗೊಬ್ಬರಗಳ ಲೆಕ್ಕಾಚಾರ ಮತ್ತು ಸಿದ್ಧಗಣಿತ ಇವುಗಳ ಜತೆಗೆ ಮಣ್ಣಿನ ಫಲವತ್ತತೆ, ಮಣ್ಣಿನ ಆರೋಗ್ಯ ಮತ್ತು ರಸಗೊಬ್ಬರ ನಿರ್ವಹಣೆಯ ವಿಷಯಗಳ ಕುರಿತು ತರಬೇತಿ ಆಯೋಜಕ, ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಪಿ.ವೀರನಾಗಪ್ಪ ಮಾಹಿತಿ ನೀಡಿದರು.

ತರಬೇತಿಯ ಸಮಾರೋಪದಲ್ಲಿ ಡಾ.ಎಂ.ಜೆ.ಚಂದ್ರೇಗೌಡ, ವಿಜ್ಞಾನಿ ಐ.ಸಿ.ಎ.ಆರ್-ಅಟಾರಿ ಭಾಗವಹಿಸಿದ್ದರು.

ಸಾಮಾಜಿಕ ಮಾಧ್ಯಮಗಳ ಉಪನ್ಯಾಸ

ವಿವಿಧ ರೀತಿಯ ಗೊಬ್ಬರಗಳು, ರಾಸಾಯನಿಕ ಗೊಬ್ಬರಗಳು, ನ್ಯಾನೋ ಗೊಬ್ಬರಗಳು, ರಾಸಾಯನಿಕ ಗೊಬ್ಬರಗಳಲ್ಲಿ ಕಲಬೆರಿಕೆ ಕಂಡುಹಿಡಿಯುವ ವಿಧಾನಗಳು, ಹನಿ ರಸಾವರಿ ತಾಂತ್ರಿಕತೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಸಂವಹಂನ ಕೌಶಲಗಳು ಮತ್ತು ಸಾಮಾಜಿಕ ಮಾಧ್ಯಮಗಳ ಕುರಿತು ಉಪನ್ಯಾಸ ನೀಡಲಾಗಿದೆ ಎಂದು ಡಾ.ಪಿ.ವೀರನಾಗಪ್ಪ ತಿಳಿಸಿದರು

ಕಾರ್ಯಕ್ರಮಕ್ಕೆ ಭಾಗವಹಿಸಲು ಇಚ್ಛಿಸುವ ಶಿಬಿರಾರ್ಥಿಗಳು 12,500 ರೂಪಾಯಿ ವಂತಿಕೆಯನ್ನು ಡಿಡಿ ಮೂಲಕ ಸಂಬಂಧಪಟ್ಟ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಮುಖಾಂತರ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಸಲ್ಲಿಸಿದ್ದಲ್ಲಿ 15 ದಿನಗಳ ಸರ್ಟಿಫಿಕೇಟ್ ಕೋರ್ಸ್ ಸೇರ್ಪಡೆಯಾಗಲು ಅವಕಾಶವಿರುತ್ತದೆ. -ಡಾ.ಬಿ.ಜಿ.ಹನುಮಂತರಾಯ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ.