ಜಿಲ್ಲೆ

ಕೌಶಲ ಮೈಗೂಢಿಸಿಕೊಳ್ಳಲು ಆದ್ಯತೆ ನೀಡಿ

ಪ್ರಸಿನ್ ಕೆ.ಆರ್

ಹಾಸನ: ಈಗಿನ ಉದ್ಯೋಗ ಮಾರುಕಟ್ಟೆಗೆ ಅಗತ್ಯವಿರುವ ಕೌಶಲಗಳನ್ನು ಮೈಗೂಢಿಸಿಕೊಳ್ಳಲು ಆದ್ಯತೆ ನೀಡಿ ಎಂದು ಬೆಂಗಳೂರಿನ ನಾಗಾರ್ಜುನ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಹಾಗೂ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಡಾ.ಎಸ್.ಜಿ.ಗೋಪಾಲಕೃಷ್ಣ ಹೇಳಿದರು.

ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ 1980ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂಜಿನಿಯರಿಂಗ್ ಪದವಿ ವೇಳೆ ಓದುವ ಎಲ್ಲ ವಿಷಯಗಳು ಕೆಲಸಕ್ಕೆ ಸೇರಿದ ನಂತರ ಉಪಯೋಗಕ್ಕೆ ಬರಲಿವೆ. ಪದವಿ ಓದಿನ ವೇಳೆ ಕಲಿತ ವಿಷಯಗಳು ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಲು ಬೇಕಾದ ಭದ್ರ ಬುನಾದಿ ಒದಗಿಸುತ್ತವೆ. ಹಾಗಾಗಿ ಕಲಿಕೆಯನ್ನು ನಿರ್ಲಕ್ಷಿಸದಿರಿ ಎಂದು ಹೇಳಿದರು.

ಇಂಜಿನಿಯರಿಂಗ್ ಪದವಿ ವೇಳೆ ಓದಿದ ಹೈಡ್ರಾಲಿಕ್ಸ್ ಮತ್ತು ಫ್ಲೂೃಯಿಡ್ ಮೆಷಿನರಿಯಂತಹ ವಿಷಯ ಪದವಿ ನಂತರ ಪೇಪರ್ ಮಿಲ್‌ನಲ್ಲಿ ಶಿಫ್ಟ್ ಇಂಜಿನಿಯರ್ ಆಗಿ ಕೆಲಸ ಮಾಡಲು ಸಹಕಾರಿಯಾಯಿತು. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮಾರ್ಗದರ್ಶಕರಾಗಿ ಇಂದಿನ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿದ್ದೇವೆ. ಇದಕ್ಕಾಗಿ ಪ್ರಾಂಶುಪಾಲರಾದ ಡಾ.ಎಚ್.ಜೆ.ಅಮರೇಂದ್ರ ಅವರು ಮಾರ್ಗದರ್ಶಕ’ ಉಪಕ್ರಮ ರೂಪಿಸಿದ್ದಾರೆ ಎಂದು ತಿಳಿಸಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಚಂದ್ರಶೇಖರ್ ಮಾತನಾಡಿ, ಉದ್ಯೋಗಿಗಳಾಗಿ ದುಡಿಯುವುದಕ್ಕಿಂತ ನಿಮ್ಮದೇ ಸ್ವಂತ ಕೈಗಾರಿಕೆ ಸ್ಥಾಪಿಸಲು ಮುಂದಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ವಂತ ಉದ್ಯಮ ಪ್ರಾರಂಭಿಸಿ ಲಕ್ಷಾಂತರ ಜನರಿಗೆ ಕೆಲಸ ನೀಡುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಹೇಳಿದರು.

ಪ್ರಾಂಶುಪಾಲ ಡಾ.ಎಚ್.ಜೆ.ಅಮರೇಂದ್ರ, 1980ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳಾದ ಎಚ್ ವಿ ರಾಮಕೃಷ್ಣ, ಗೋವಿಂದರಾಜು, ಮಹಾವೀರ್ ಚಾಂದ್, ಸುರೇಶ್ ಬಾಬು, ಪ್ರಕಾಶ್, ಶಾಮಸುಂದರ್, ಎ.ಶಶಿಕುಮಾರ್, ಸುರೇಶ್ ರಾಜ್ ಜೈನ್, ರಾಮಸ್ವಾಮಿ, ಕೇಶವನ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.

===

ಚಿತ್ರ: 3ಎಚ್‌ಎಸ್‌ಎನ್2: ಹಾಸನ ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ 1980ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಡಾ.ಎಸ್.ಜಿ.ಗೋಪಾಲಕೃಷ್ಣ, ಚಂದ್ರಶೇಖರ್, ಡಾ.ಎಚ್.ಜೆ.ಅಮರೇಂದ್ರ, ಎಚ್.ವಿ. ರಾಮಕೃಷ್ಣ ಇತರರು ಇದ್ದರು.