ನರಗುಂದ: ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಹೆಚ್ಚುವರಿ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ತಾಲೂಕಿನ ಗಡಿಗ್ರಾಮ ಲಖಮಾಪುರ, ಕೊಣ್ಣೂರ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಶಾಸಕ ಸಿ.ಸಿ.ಪಾಟೀಲ ಅವರು ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೆ ತಿಳಿಸಿದರು.
ನವಿಲುತೀರ್ಥ ಜಲಾಶಯಕ್ಕೆ 22 ಸಾವಿರ ಕ್ಯೂಸೆಕ್ ಒಳಹರಿವಿದೆ. 2079.50 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗಾಗಲೇ 2076 ಅಡಿ ನೀರು ಸಂಗ್ರಹಗೊಂಡಿದ್ದು, ಮುಂಜಾಗ್ರತೆ ಕ್ರಮವಾಗಿ ಬುಧವಾರ 12 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಮುಂದಿನ 2-3 ದಿನ ಬೆಳಗಾವಿ ಜಿಲ್ಲಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಅತ್ಯಧಿಕ ಮಳೆ ಸುರಿದರೆ ಜಲಾಶಯದಿಂದ ಮತ್ತೆ ಹೆಚ್ಚಿನ ನೀರು ಹೊರಬಿಡುವ ಸಾಧ್ಯತೆ ಇದೆ. ನರಗುಂದ, ರೋಣ ತಾಲೂಕಿನ ಅಧಿಕಾರಿಗಳು ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾಗುವ ಮತಕ್ಷೇತ್ರದ 16 ಗ್ರಾಮಗಳ ಜನ,ಜಾನುವಾರುಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಮೃದ್ಧವಾಗಿ ಬೆಳೆದಿರುವ ವಿವಿಧ ಬೆಳೆಗಳನ್ನು ಡ್ರೋಣ್ ಮೂಲಕ ಸಮೀಕ್ಷೆ ಮಾಡಿಟ್ಟುಕೊಂಡಿರಬೇಕು. ಇದರಿಂದ ಪ್ರವಾಹದ ನಂತರ ಬೆಳೆ ಹಾನಿ ಪರಿಹಾರ ನೀಡಲು ಅನುಕೂಲವಾಗುತ್ತದೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಸೂಚಿಸಿದರು.
ನರಗುಂದ ಭಾಗದ ಮಲಪ್ರಭಾ ನದಿ, ಕಾಲುವೆಗಳಲ್ಲಿ ತುಂಬಿರುವ ಹೂಳು ತೆರವುಗೊಳಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲದೆ, ಲಕ್ಷ್ಮೀ ಹೆಬ್ಬಾಳಕರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ನವಿಲುತೀರ್ಥ ನೀರು ನಿರ್ವಹಣೆ ಸಮಿತಿ ಸಭೆಯಲ್ಲಿಯೂ ಚರ್ಚಿಸಲಾಗಿದೆ ಎಂದರು.
ಪ್ರವಾಹ ಸಂದರ್ಭದಲ್ಲಿ ರೈತರು ಪಂಪ್‌ಸೆಟ್ ತರುವುದು, ನದಿ ಪಕ್ಕದಲ್ಲಿ ಜಾನುವಾರು ಬಿಡುವುದು, ದಡದಲ್ಲಿ ರೀಲ್ಸ್ ಮಾಡುವ ದುಸ್ಸಾಹಸಕ್ಕೆ ಮುಂದಾಗಬಾರದು. ಕಾಲಕಾಲಕ್ಕೆ ತಾಲೂಕಾಡಳಿತ, ಪೊಲೀಸ್, ಕಂದಾಯ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸಬೇಕು. ಅಗತ್ಯ ಬಿದ್ದರೆ ಕಾಳಜಿ ಕೇಂದ್ರ ಪ್ರಾರಂಭಿಸಲಾಗುವುದು ಎಂದರು.
ತಾಪಂ ಇಒ ಎಸ್.ಕೆ. ಇನಾಮದಾರ, ವಾಸನ ಪಿಡಿಒ ಮಲ್ಲಪ್ಪ ವಾಲಿ, ಕೊಣ್ಣೂರ ಪಿಡಿಒ ಮಂಜುನಾಥ ಗಣಿ, ಗ್ರಾಪಂ ಅಧ್ಯಕ್ಷೆ ಸಿದ್ದಮ್ಮ ಕಳಸನ್ನವರ, ಪರಪ್ಪ ಸಾಹುಕಾರ, ಶಂಕರಗೌಡ ಯಲ್ಲಪ್ಪಗೌಡ್ರ, ಎನ್.ಕೆ. ಸೋಮಾಪೂರ, ಶೇಖರಗೌಡ ಸಾಲಿಗೌಡ್ರ, ಬಿ.ಬಿ. ಐನಾಪೂರ, ಉಮೇಶಗೌಡ ಪಾಟೀಲ, ಎನ್.ಟಿ. ಕೆಂಪನಗೌಡ್ರ, ಸಿದ್ದೇಶ ಹೂಗಾರ, ಕೊಟ್ರೇಶ ಕೊಟ್ರಶೆಟ್ಟರ, ಬಿ.ಎಂ. ಕೊರಗಣ್ಣವರ, ಶಂಕರಗೌಡ ನಡಮನಿ, ಬಸನಗೌಡ ನಡಮನಿ, ಸುರೇಶ ಬಾಳಿಕಾಯಿ, ಈರಣ್ಣ ಕಳಸನ್ನವರ, ಶೇಖರಗೌಡ ಸಾಲಿಗೌಡ್ರ, ಶಿವಾನಂದ ಮುತವಾಡ, ಯೋಗನಗೌಡ ರಾಯನಗೌಡ್ರ, ಸಂಗಪ್ಪ ಮಡಿವಾಳರ ಉಪಸ್ಥಿತರಿದ್ದರು.