ಬೆಳಗಾವಿ: ಆಸ್ತಿ ತೆರಿಗೆ, ಉದ್ಯಮ ಪರವಾನಗಿ, ಬಾಡಿಗೆ ಆದಾಯ, ಬಳಕೆದಾರರ ಶುಲ್ಕ, ಇನ್ನಿತರ ಸಂಗ್ರಹ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ನಗರ ಸ್ಥಳೀಯ ಸಂಸ್ಥೆ, ಪಂಚಾಯತ್ ರಾಜ್ ಸಂಸ್ಥೆಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ ನಾರಾಯಣಸ್ವಾಮಿ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಪಂಚಾಯತ್ ರಾಜ್ ವಿಷಯಗಳ ಕುರಿತು 5ನೇ ರಾಜ್ಯ ಹಣಕಾಸು ಆಯೋಗದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಿವಿಧ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಆಡಳಿತಾತ್ಮಕ ಸಮಸ್ಯೆ ಪರಿಹರಿಸಲು ಆಯೋಗದಿಂದ ಶಿಫಾರಸು ಮಾಡಲಾಗುವುದು. ಕಟ್ಟಡ ತೆರಿಗೆ, ವಾಣಿಜ್ಯ ಮಳಿಗೆಗಳ ತೆರಿಗೆ ಬಾಕಿ ವಸೂಲಾತಿಗೆ ಕ್ರಮ ವಹಿಸಬೇಕು ಎಂದರು.
ಶೇ.30ರಷ್ಟು ಅನುದಾನ ನಿಗದಿ:
ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಜಿಪಂನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 13 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತರ 325 ಒಟ್ಟು ಮಂಜೂರಾದ ಹುದ್ದೆಗಳಲ್ಲಿ 129 ಹುದ್ದೆಗಳು ಮಾತ್ರ ಮಂಜೂರಾಗಿವೆ. ಅದರಲ್ಲಿ 196 ಹುದ್ದೆ ಭರ್ತಿಯಾಗಬೇಕಿದೆ. ಗ್ರಾಪಂಗಳಲ್ಲಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕ ಹುದ್ದೆ ನಿಯಮಾನುಸಾರ ಭರ್ತಿಯಾಗಬೇಕಿದೆ. ಪ್ರತಿ ಗ್ರಾಪಂಗೆ 15ನೇ ಹಣಕಾಸು ಯೋಜನೆ ಒಟ್ಟು ಹಂಚಿಕೆಯ ಶೇ.30ರಷ್ಟು ಅನುದಾನ ನಿಗದಿಯಾಗುತ್ತಿದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅನುದಾನದೊಂದಿಗೆ ಕುಡಿಯುವ ನೀರಿನ ನಿರ್ವಹಣೆಗಾಗಿ ವೆಚ್ಚ ಭರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ, ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಣಕಾಸು ಆಯೋಗ ಕಳುಹಿಸಿರುವ ಪ್ರಶ್ನಾವಳಿ ಕುರಿತ ಮಾಹಿತಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಬಳಿಕ ಪಂಚಾಯಿತಿ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಾಚರಣೆ, ಹುದ್ದೆಗಳು, ಆಯವ್ಯಯ, ವೆಚ್ಚಗಳ ವಿವರ, ರಾಜ್ಯ ಮತ್ತು ಕೇಂದ್ರ ಹಣಕಾಸು ಆಯೋಗದ ಅನುದಾನ, ಹಂಚಿಕೆ, ಬಿಡುಗಡೆ ಮಾಡಲಾದ ವೆಚ್ಚ ಕುರಿತು ವಿವರಿಸಿದರು.
5ನೇ ರಾಜ್ಯ ಹಣಕಾಸು ಆಯೋಗದ ಸದಸ್ಯ ಮೊಹಮ್ಮದ್ ಸನಾವುಲ್ಲಾ, ಆರ್. ಫೊಂಡೆ, ಸಮಾಲೋಚಕರಾದ ಎಂ.ಕೆ. ಕೆಂಪೇಗೌಡ, ಸಿ.ಜಿ ಸುಪ್ರಸನ್ನ, ವಿಶೇಷಾಧಿಕಾರಿ ಇ.ಎಂ.ವಹಾಬ್, ಮೇಯರ್ ಸವಿತಾ ಕಾಂಬಳೆ, ಉಪ ಮೇಯರ್ ಆನಂದ ಚವ್ಹಾಣ, ಪಾಲಿಕೆ ಆಯುಕ್ತೆ ಶುಭ ಬಿ., ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಇತರರಿದ್ದರು.