ಜಿಲ್ಲೆ

ಮಕ್ಕಳಲ್ಲಿ ಭಾಷಾ ಕಲಿಕೆ ಪ್ರಗತಿಗೆ ಆದ್ಯತೆ ನೀಡಿ

Mysuru - Desk - Naveen Kumar H P

ಮಂಡ್ಯ : ಸರ್ಕಾರಿ ಶಾಲಾ ಮಕ್ಕಳಲ್ಲಿ ಶಿಕ್ಷಕರು ಭಾಷಾ ಕಲಿಕೆಯ ಪ್ರಗತಿ ಹೆಚ್ಚಿಸಲು ಪೂರಕವಾದ ಚಟುವಟಿಕೆಗಳನ್ನು ತರಗತಿಯಲ್ಲಿ ಅನುಷ್ಠಾನಗೊಸಬೇಕು ಎಂದು ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಸಲಹೆ ನೀಡಿದರು.

ಮೇಲುಕೋಟೆ ಹೋಬಳಿಯ ಜಕ್ಕನಹಳ್ಳಿ ವೃತ್ತದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಭಾಷಾಕಲಿಕೆಯ ಪ್ರಗತಿ ಕುರಿತು ಮಾತನಾಡಿದ ಅವರು, ಭಾಷೆಯನ್ನು ಸಮರ್ಪಕವಾಗಿ ಕಲಿಯದಿದ್ದರೆ ಯಾವುದೇ ವಿಷಯದಲ್ಲೂ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿಹೊಂದಲು ಸಾಧ್ಯವಾಗುವುದಿಲ್ಲ. ಶಾಲಾ ಭೇಟಿಯ ವೇಳೆ ಬಹುತೇಕ ಶಾಲೆಗಳಲ್ಲಿ ಮಕ್ಕಳು ಭಾಷಾ ಕಲಿಕೆಯಲ್ಲಿ ಹಿಂದುಳಿದಿರುವುದು ಕಂಡುಬರುತ್ತಿದೆ ಎಂದರು.


ಭಾಷಾಕಲಿಕೆಯ ಬಗ್ಗೆ ಎಲ್ಲ ಶಿಕ್ಷಕರೂ ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ. ಕಲಿಕೆಯಲ್ಲಿ ಹಿಂದುಳಿದ ಮಗುವನ್ನು ಗುರುತಿಸಿ ಆ ವಿದ್ಯಾರ್ಥಿಯ ಪ್ರಗತಿಗೆ ಶಿಕ್ಷಕರು ಕಾಲಮಿತಿ ನಿಗದಿಮಾಡಿಕೊಂಡು ಭಾಷಾ ಕಲಿಕೆಯ ಪ್ರಗತಿಗೆ ಕಾಳಜಿಹಿಸಬೇಕು. ಸ್ಪಷ್ಟವಾದ ಓದು ಮತ್ತು ಶುದ್ಧವಾದ ಬರಹ ಕಲಿಯಲು ಪ್ರತಿ ವಿದ್ಯಾರ್ಥಿಯ ಬಗ್ಗೆ ವೈಯುಕ್ತಿಕ ಕಾಳಜಿಗೆ ವಿಶೇಷ ಆದ್ಯತೆ ನೀಡಬೇಕು. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ ಎಂದರು.


ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್, ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಬಸವರಾಜು, ತಿಪ್ಪೇಶ್, ಜಕ್ಕನಹಳ್ಳಿ ಸಿಆರ್‌ಪಿ ವೆಂಕಟೇಶ್, ಮೇಲುಕೋಟೆ ಸಿಆರ್‌ಪಿ ಬೆಟ್ಟಸ್ವಾಮಿಗೌಡ ಇತರರು ಇದ್ದರು.