ಕಡೂರು: ಪಟ್ಟಣದ ಸ್ವಚ್ಛತೆಗೆ ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರು ದುಶ್ಚಟಗಳಿಂದ ವಿಮುಖರಾಗಿ ಆರೋಗ್ಯದ ಬದುಕನ್ನು ರೂಪಿಸಿಕೊಳ್ಳಬೇಕಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿಶ್ರೀ ನಿವಾಸ್ ತಿಳಿಸಿದರು. ಗಣಪತಿ ಪೆಂಡಾಲ್ ಆವರಣದಲ್ಲಿ ಶುಕ್ರವಾರ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣವನ್ನು ಸುಂದರವಾಗಿಸುವಲ್ಲಿ ಪೌರಕಾರ್ಮಿಕರ ಪರಿಶ್ರಮ ಹೆಚ್ಚಿನದಾಗಿರುತ್ತದೆ. ಇದರ ಜತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಸರ್ಕಾರ ಪೌರಕಾರ್ಮಿಕರಿಗೆ ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿದೆ. ತಮ್ಮ ಒತ್ತಡದ ಕಾರ್ಯದ ನಡುವೆಯೂ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಪೌರಕಾರ್ಮಿಕರಿಗಾಗಿ ಕ್ರೀಡಾದಿನವನ್ನು ಮೀಸಲಿಡಲಾಗಿದೆ ಎಂದರು. ಉಪಾಧ್ಯಕ್ಷೆ ಮಂಜುಳಾ ಚಂದ್ರು ಮಾತನಾಡಿ, ಕ್ರೀಡಾಕೂಟಗಳಿಂದ ಒತ್ತಡದ ಮನಸ್ಸನಿಂದ ಹೊರಬರಲು ಸಾಧ್ಯ ಎಂದರು.
ಸದಸ್ಯರಾದ ಈರಳ್ಳಿ ರಮೇಶ್, ಮರುಗುದ್ದಿ ಮನು, ಯತಿರಾಜ್, ಗೋವಿಂದು, ಸೈಯಾದ್ ಯಾಸೀನ್, ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎ.ಗಿರೀಶ್, ತಿಮ್ಮಯ್ಯ, ಪರಿಸರ ಅಭಿಯಂತರ ಶ್ರೇಯಸ್‌ಕುಮಾರ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್‌ಮೂರ್ತಿ, ಜಗದೀಶ್, ಶಂಕರ್, ಚಿನ್ನರಾಜು ಇದ್ದರು.