ನರಗುಂದ: ಪಟ್ಟಣದ ಮೂರು ವಿವಿಧ ವಸತಿ ನಿಲಯಗಳಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ಒಂಟಗೋಡಿ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ತಾಪಂ ಕಚೇರಿ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ನರಗುಂದ ತಾಲೂಕು ಕ್ರೀಡಾಂಗಣದಲ್ಲಿರುವ ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿ ಪೌಷ್ಟಿಕ ಆಹಾರ, ಕುಡಿಯುವ ನೀರು, ಪಠ್ಯಪುಸ್ತಕ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.
‘ತಾಲೂಕಿನ ನೂರಾರು ಬಡ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ವೈಯಕ್ತಿಕ ಸೊಳ್ಳೆ ಪರದೆ ನೀಡುವುದರ ಜತೆಗೆ ಮಳೆಗಾಲದಲ್ಲಿ ಸೊಳ್ಳೆಗಳು ಪ್ರವೇಶಿಸದಂತೆ ವಸತಿ ನಿಲಯದ ಕಿಟಕಿಗಳಿಗೆ ಪರದೆ ಹಾಕಿಸಬೇಕು. ಹವಾಮಾನ ವೈಪರೀತ್ಯದಿಂದ ಮಕ್ಕಳಿಗೆ ಯಾವುದೇ ಕಾಯಿಲೆಗಳು ಹರಡದಂತೆ ಮುಂಜಾಗ್ರತೆ ವಹಿಸಬೇಕು. ಸ್ನಾನಕ್ಕೆ ಹಾಗೂ ಅಗತ್ಯ ಬಿದ್ದರೆ ವಿದ್ಯಾರ್ಥಿಗಳಿಗೆ ಕುಡಿಯಲು ಸಹ ಬಿಸಿನೀರು ಪೂರೈಸಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ವಿನೋದ ಅಡಿಕೆ ಅವರಿಗೆ ಸೂಚಿಸಿದರು.
ಸರ್ಕಾರ ವಸತಿ ನಿಲಯದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪ್ರತಿವರ್ಷ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ನಿತ್ಯ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಸರ್ಕಾರದ ಮೆನು ಚಾರ್ಟ್ ಪ್ರಕಾರವೇ ಗುಣಮಟ್ಟದ ಆಹಾರ ವಿತರಿಸಬೇಕು. ಕಳಪೆ ಆಹಾರ ವಿತರಿಸುತ್ತಿರುವುದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ವಸತಿ ನಿಲಯಗಳಲ್ಲಿ ಯಾವುದೇ ರೀತಿಯ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದು ನಿಲಯ ಪಾಲಕರಿಗೆ ತಿಳಿಸಿದರು. ವಸತಿ ನಿಲಯದ ಸಿಸಿಟಿವಿ, ಸ್ವಚ್ಛತೆ, ಅಡುಗೆ ಕೋಣೆ, ಆಹಾರ ದಾಸ್ತಾನು ಕೊಠಡಿಗಳನ್ನು ಪರಿಶೀಲಿಸಿ ಅಧಿಕಾರಿಗಳು ಸ್ವಚ್ಛತೆಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ, ಕಂದಾಯ ನಿರೀಕ್ಷಕ ಎಸ್.ಎಲ್. ಪಾಟೀಲ, ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಎಂ.ಬಿ. ಚಿನಗುಡಿ, ಗ್ರಾಮ ಲೆಕ್ಕಾಧಿಕಾರಿ ಎಂ.ವಿ. ಶೆಟ್ಟರ, ವಸತಿ ನಿಲಯ ಪಾಲಕ ಉಮೇಶ ಅವರಾದಿ, ಆನಂದ ಬನಪ್ಪನವರ, ಮಂಜುನಾಥ ಘಾಳಿ ಇದ್ದರು.