ಜಿಲ್ಲೆ

ಶಿಕ್ಷಣ, ಕೌಶಲ ತರಬೇತಿಗೆ ಆದ್ಯತೆ ನೀಡಿ

Dharwada - Vikram Nadiger

ಶಿಕ್ಷಣ, ಕೌಶಲ ತರಬೇತಿಗೆ ಆದ್ಯತೆ ನೀಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ. ಮಕ್ಕಳ ಅಗತ್ಯ ಶಿಕ್ಷಣ ಮತ್ತು ಕೌಶಲ ತರಬೇತಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತಿದ್ದು, ರಾಜ್ಯ ಸರ್ಕಾರಗಳನ್ನೂ ಪ್ರೋತ್ಸಾಹಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಲೋಕೋಪಯೋಗಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2022-23ನೇ ಸಾಲಿನ ಠೇವಣಿ ವಂತಿಗೆ ಅಡಿ ನಿರ್ಮಿಸಿರುವ ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿನಿಲಯ ಕಟ್ಟಡಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ತಂತ್ರಜ್ಞಾನಕ್ಕೆ ಒತ್ತು ಕೊಟ್ಟಿದ್ದು, ಮಕ್ಕಳು ಶಾಲೆಯಲ್ಲಿ, ಕಾಲೇಜುಗಳಲ್ಲಿ ತಮಗೆ ಬೇಕಾದ ವಿಷಯ ಅಧ್ಯಯನ ಮಾಡುವ ಅವಕಾಶವನ್ನು ಇಂದಿನ ದಿನಗಳಲ್ಲಿ ಸರ್ಕಾರ ಕಲ್ಪಿಸಿದೆ. ಆಸಕ್ತಿ ಹೊಂದಿರುವ ವಿಭಾಗಗಳಲ್ಲಿ ಓದುವುದು ಉತ್ತಮ. ಭಾರತದಲ್ಲಿ ಕೆಲಸಗಳು ಹೆಚ್ಚಾಗಿದ್ದು, ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂದರು.

ಶಾಲೆ, ಕಾಲೇಜು, ವಸತಿ ನಿಲಯಗಳಿಗೆ ಪ್ರಾಧಾನ್ಯತೆ ನೀಡುವ ಅಗತ್ಯವಿದೆ. ಕೈಗಾರಿಕೆಗಳ ಬೆಳವಣಿಗೆ, ಹೊಸ ಸಂಶೋಧನೆಗಳು ನಮ್ಮ ಮಾನವ ಸಂಪನ್ಮೂಲ ಸದುಪಯೋಗಕ್ಕೆ ಸದಾವಕಾಶ ನೀಡುತ್ತವೆ. ಕೌಶಲ ಭರಿತ ಮಾನವ ಸಂಪನ್ಮೂಲ ದೇಶದ ಆರ್ಥಿಕ ಅಭಿವೃದ್ಧಿಗೆ ಅಗತ್ಯವಿದೆ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ, ಕೌಶಲ ತರಬೇತಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದರು.

ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ವಿದ್ಯಾಕಾಶಿ ಧಾರವಾಡದಲ್ಲಿ ವಸತಿ ನಿಲಯ ಆರಂಭಿಸಿರುವುದು ಸಂತಸದ ವಿಷಯ. ಜಿಲ್ಲೆಗೆ ಬೇರೆ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕೊರತೆ ಇತ್ತು. ಇದೀಗ ಸಾವಿರ ಮಕ್ಕಳ ಸಾಮರ್ಥ್ಯದ ವಸತಿ ನಿಲಯ ಆರಂಭಿಸಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞತೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಸತಿ ನಿಲಯಗಳು ನಿರ್ಮಾಣವಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಯಾವುದೇ ಜಾತಿ ಭೇದವಿಲ್ಲ. ಎಲ್ಲ ಮಕ್ಕಳು ಒಂದೇ. ಬೇರೆ ಬೇರೆ ಜಾತಿ, ಉಪಜಾತಿಗಳ ಪ್ರಕಾರ ಮಕ್ಕಳಿಗೆ ವಸತಿ ನಿಲಯಗಳನ್ನು ಕಲ್ಪಿಸಿಕೊಡದೆ, ಎಲ್ಲರಿಗೂ ಸಮಾನವಾಗಿ ವಸತಿ ನಿಲಯ ಕಲ್ಪಿಸಿಕೊಟ್ಟರೆ, ಸಹೋದರರಂತೆ ಬೆಳೆದು ಸಮಾಜದಲ್ಲಿ ಎಲ್ಲರೂ ಒಂದೇ ಎಂದು ಭಾವಿಸಿಕೊಂಡು ಬದುಕುತ್ತಾರೆ ಎಂದರು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮೇಯರ್ ರಾಮಪ್ಪ ಬಡಿಗೇರ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಲೋಕೊಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ ಸಂಜೀವಕುಮಾರ ಹುಲಕಾಯಿ, ಕಾರ್ಯನಿರ್ವಾಹಕ ಇಂಜಿನಿಯರ ವಿಜಯಕುಮಾರ ಎಚ್., ಪ್ರಶಾಂತ ಪಾಟೀಲ, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ದೊಡ್ಡಮನಿ, ಸಹಾಯಕ ಇಂಜಿನಿಯರ ಯು.ಎಂ.ಗದಗಕರ, ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ, ವಿಷ್ಣುತಿರ್ಥ ಕೊರ್ಲಹಳ್ಳಿ, ಚಂದ್ರಶೇಖರ ಮನಗುಂಡಿ, ಶಿವು ಹಿರೇಮಠ, ಆನಂದ ಯಾವಗಲ್, ಮುಖಂಡರಾದ ಸಂಜಯ ಕಪಟಕರ, ಮೋಹನ ರಾಮದುರ್ಗ, ಇತರರು ಇದ್ದರು.