ಜಿಲ್ಲೆ

ಕಾಫಿ ಉತ್ಪಾದನೆ ದ್ವಿಗುಣಗೊಳಿಸಲು ಆದ್ಯತೆ ಕೊಡಿ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಲ್ಲಿ ಕಾಫಿ ಮ್ಯೂಸಿಯಂ ಸ್ಥಾಪನೆ ಆಗಬೇಕು, ಕಾಫಿ ಕೇಂದ್ರೀಕೃತ ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು, ಕಾಫಿಯ ಆಂತರಿಕ ಬಳಕೆಗೆ ಪ್ರೋತ್ಸಾಹ ಕೊಡಬೇಕು. ಬೆಳೆಗಾರರು ತಮ್ಮ ಕಾಫಿಗೆ ಸ್ವಂತ ಬ್ರಾಂಡ್ ಮಾಡಿಕೊಳ್ಳಬೇಕು. ಕಾಫಿ ಬೆಳೆಗಾರರ ಸಂಪೂರ್ಣ ಸಾಲ ಒಂದು ಬಾರಿ ಮನ್ನಾ ಮಾಡಬೇಕು. ಕಾಫಿ ತೋಟದಲ್ಲಿ ಇತರ ಪೂರಕ ಬೆಳೆಗಳನ್ನೂ ಬೆಳೆಯಬೇಕು. ಕಾಫಿ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು….

ಇವು ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ನಂ.೧ ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಇಲ್ಲಿನ ಕ್ಲೌಡ್ ಕಿಚನ್ ಸಭಾಂಗಣದಲ್ಲಿ ಕಾಫಿ ಬೆಳೆಗಾರರು ಮತ್ತು ಕಾಫಿ ತಜ್ಞರ ಜತೆಗೆ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ವ್ಯಕ್ತವಾದ ಪ್ರಮುಖ ಅಭಿಪ್ರ್ರಾಯಗಳು.

ಕೊಡಗಿನಲ್ಲಿ ಬಹುತೇಕರಿಗೆ ಕಾಫಿಯೇ ಪ್ರಮುಖ ಕಸುಬಾಗಿದೆ. ಇದು ಇಲ್ಲಿಯ ಬಹುಮುಖ್ಯ ಆರ್ಥಿಕ ಮೂಲವೂ ಹೌದು. ಆದರೆ ಇತ್ತೀಚಿನ ದಶಕಗಳಲ್ಲಿ ಬದಲಾಗುತ್ತಿರುವ ವ್ಯವಸ್ಥೆಗಳಿಂದ ಬೆಳೆಗಾರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾನೆ. ಕಾಫಿ ಬೆಳೆಗಾರನ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಅರೆಬಿಕಾ ತೋಟ ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಸರ್ಕಾರ ಬೆಳೆಗಾರನ ಹಿತ ಕಾಪಾಡಬೇಕು. ಒಂದು ಚೀಲ ಕಾಫಿ ಉತ್ಪಾದಿಸಲು ೪-೫ ಸಾವಿರ ರೂ. ಖರ್ಚು ಬರುತ್ತಿದೆ. ಆದರೆ ಬೆಲೆಯಲ್ಲಿ ಮಾತ್ರ ಯಾವುದೇ ದೊಡ್ಡ ವ್ಯತ್ಯಾಸ ಆಗಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು.

ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರ ಕೊರತೆ ಕಂಡುಬರುತ್ತಿದೆ. ಕೆಲಸ ಬೇಗ ಮುಗಿಸಿಬಿಡುವ ಭರದಲ್ಲಿ ಗುಣಮಟ್ಟ ಕಡೆಗಣಿಸಿ ಕಾಫಿ ಕೊಯ್ಲು ಮಾಡಲಾಗುತ್ತಿದೆ. ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿಗೆ ಬರುತ್ತಿದ್ದಾರೆ. ಕಾರ್ಮಿಕ ಸಚಿವಾಲಯದಿಂದ ಇವರನ್ನು ಏಕ ಗವಾಕ್ಷಿ ಯೋಜನೆ ಮೂಲಕ ನಿರ್ವಹಣೆ ಮಾಡಿದರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು. ಕಾಫಿ ತೋಟಗಳಲ್ಲಿ ಕಾರ್ಮಿಕರ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಬೆಳೆಗಾರರು ಆಸಕ್ತಿ ತೋರಿಸಿ ತೋಟ ನಿರ್ವಹಣೆ ಮಾಡಿಕೊಳ್ಳಬೇಕು. ಈಗಿನ ಮಳೆ ಕೊರತೆ ಅರೆಬಿಕಾ ಕಾಫಿಗೆ ಅಷ್ಟೊಂದು ಸಮಸ್ಯೆ ಉಂಟುಮಾಡುವುದಿಲ್ಲ. ಆದರೆ ರೋಬೊಸ್ಟಾಕ್ಕೆ ತೊಂದರೆ ಆಗುತ್ತದೆ.

ಕಾಫಿ ಮಂಡಳಿಯಿಂದ ಸಣ್ಣ ಬೆಳೆಗಾರರಿಗೆ ಸ್ಪಿಂಕ್ಲರ್ ಖರೀದಿ, ಬಾವಿ, ಕೆರೆ ತೆಗೆಸಲು, ಮರುನಾಟಿಗೆ ಸಹಾಯಧನ ನೀಡಲಾಗುತ್ತದೆ. ಇದನ್ನು ಬೆಳೆಗಾರರು ಬಳಸಿಕೊಳ್ಳಬೇಕು. ಕಾಫಿ ತೋಟಕ್ಕೆ ಆನೆ ಸೇರಿದಂತೆ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಭಯದ ವಾತಾವರಣದಲ್ಲೇ ಬೆಳೆಗಾರ ಬದುಕಬೇಕಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕಿದೆ. ಆನೆಗಳಿಗೆ ಕಾಡೊಳಗೆಯೇ ನೀರು ಮತ್ತು ಆಹಾರ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಅವುಗಳಿಗೆ ಕಾಡೊಳಗೆಯೇ ಬದುಕಲು ಸೂಕ್ತ ವಾತಾವರಣ ನಿರ್ಮಾಣ ಮಾಡಬೇಕು ಎನ್ನುವ ಸಲಹೆಗಳು ಕೇಳಿಬಂದವು.

ಕಾಫಿಯನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡಬೇಕು. ಕಾಫಿ ಬೆಳೆ ಕೃಷಿಗೆ ಸಂಬಂಧಿಸಿದ್ದಾಗಿದೆ. ಸರ್ಫೇಸಿ ಕಾಯ್ದೆ ಬ್ಯಾಂಕ್‌ಗಳ ಪರ ಇರುವ ಕಾಯ್ದೆಯಾಗಿದೆ. ಈ ಕಾಯ್ದೆಯಿಂದ ಸಣ್ಣ ಬೆಳೆಗಾರರಿಗೆ ಬಹಳ ತೊಂದರೆ ಆಗುತ್ತಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುತ್ತಿದೆ. ಬೆಳೆ ವಿಮಾ ಯೋಜನೆಯಲ್ಲೂ ಕಾಫಿ ಸೇರಿಕೊಂಡಿಲ್ಲ. ಹಾಗಾಗಿ ಕರಿಮೆಣಸು, ಅಡಿಕೆ ಮಾದರಿಯಲ್ಲಿ ಕಾಫಿಯನ್ನೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಸೇರಿಸಬೇಕು ಎಂದು ಒತ್ತಾಯಿಸಲಾಯಿತು.

ವಿಯೆಟ್ನಾಂಗೆ ಕಾಫಿ ಪರಿಚಯಿಸಿದ್ದು ಭಾರತ. ಕರಿಮೆಣಸು ಕೂಡ ಇಲ್ಲಿಂದಲೇ ಪರಿಚಯವಾಯಿತು. ಆದರೆ ಈಗ ಅಲ್ಲಿ ೫ ಪಟ್ಟು ಹೆಚ್ಚು ಕಾಫಿ, ೮ ಪಟ್ಟು ಹೆಚ್ಚು ಕರಿಮೆಣಸು ಬೆಳೆಯಲಾಗುತ್ತಿದೆ. ಅಲ್ಲಿಯ ವಾತಾವರಣ ಮತ್ತು ಮಣ್ಣು ಕಾಫಿ ಬೆಳೆಯಲು ಪೂರಕವಾಗಿದೆ. ಹೆಚ್ಚು ಖರ್ಚು ಮಾಡದೆ ಅಲ್ಲಿ ಕಾಫಿ ಬೆಳೆಯಲಾಗುತ್ತದೆ. ಕೊಡಗಿನಲ್ಲೂ ಇದೇ ಪದ್ಧತಿ ರೂಢಿಸಿಕೊಳ್ಳಬೇಕು. ಈಗಿರುವ ಪ್ರದೇಶದಲ್ಲೇ ಈಗಿನ ಉತ್ಪಾದನೆ ದ್ವಿಗುಣ ಆಗುವಂತೆ ನೋಡಿಕೊಳ್ಳಬೇಕು. ವೈಜ್ಞಾನಿಕವಾಗಿ ಕಾಫಿ ಬೆಳೆಯುವುದರಿಂದ ಇದು ಸಾಧ್ಯವಿದೆ. ಬ್ರಿಜಿಲ್ ಕೇವಲ ೩೦ ವರ್ಷಗಳಲ್ಲಿ ತನ್ನ ಉತ್ಪಾದನೆಯನ್ನು ೩ ಪಟ್ಟು ಜಾಸ್ತಿ ಮಾಡಿಕೊಂಡಿದೆ. ಅಧಿಕ ಇಳುವರಿ ಕೊಡುವ ಗಿಡಗಳನ್ನು ಗುರುತಿಸಿ ಕಸಿ ಮಾಡುವುದರಿಂದ ಇದು ಸಾಧ್ಯವಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಕೆ.ಕೆ. ವಿಶ್ವನಾಥ್ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ನಡೆದ ವಿಶ್ವ ಕಾಫಿ ಮೇಳದಿಂದ ಸಾಕಷ್ಟು ಅನುಕೂಲ ಆಗಿದೆ. ಕೊಡಗು ಸೇರಿದಂತೆ ದೇಶದ ಕಾಫಿ ಅಂತಾಷ್ಟ್ರೀಯ ಮಟ್ಟದಲ್ಲಿ ಪರಿಚಯ ಆಗುವಂತಾಯಿತು. ಕಾಫಿ ಮಂಡಳಿಯಲ್ಲಿ ಅಧ್ಯಕ್ಷರು ಇಲ್ಲದಿದ್ದರೂ ಅಧಿಕಾರಿಗಳು ನೇತೃತ್ವದಲ್ಲಿ ಅತ್ಯುತ್ತಮವಾಗಿ ಮೇಳ ನಡೆಯಿತು. ಮುಂದೆ ಕಾಫಿ ಮಂಡಳಿಗೆ ಅಧ್ಯಕ್ಷರನ್ನು ನೇಮಿಸುವ ಸಂದರ್ಭ ಕಾಫಿ ಬೆಳೆಯುವ ಪ್ರದೇಶದ, ಕಾಫಿ ಬಗ್ಗೆ ಎಲ್ಲಾ ವಿಷಯ ಗೊತ್ತಿರುವವರಿಗೆ ಆದ್ಯತೆ ಕೊಡಬೇಕು. ಇದರಿಂದ ಬೆಳೆಗಾರರಿಗೆ ಹೆಚ್ಚು ಅನುಕೂಲ ಆಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾದವು.

ಪೇಯಗಳ ವಿಷಯ ಬಂದಾಗ ಟೀ ಜತೆಗೆ ಕಾಫಿ ಹೋಲಿಕೆ ಬೇಡ. ಎರಡೂ ಪೇಯಗಳ ಬೆಲೆ ಒಂದೇ ರೀತಿ ಇರುವುದು ಕೂಡ ಸರಿಯಾದ ವಿಧಾನವಲ್ಲ. ಟೀಗೆ ಹೋಲಿಸಿದರೆ ಕಾಫಿ ಉತ್ಪಾದನಾ ವೆಚ್ಚ ಹೆಚ್ಚಿದೆ. ಕೆಲವೆಡೆ ಕಾಫಿಗೆ ಸಂಬಂಧಿಸಿದಂತೆ ಆಸಕ್ತರು ಕೆಲವೊಂದು ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಕೃತಕ ಬುದ್ಧಿಮತ್ತೆಯ ಬಳಕೆಯೂ ಆಗುತ್ತಿದೆ. ಇಂಥವುಗಳಿಗೆ ಕಾಫಿ ಮಂಡಳಿ ಮೂಲಕ ಪ್ರೋತ್ಸಾಹ ಕೊಟ್ಟು ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಲಾಯಿತು.