ಆಲ್ದೂರು: ವೀರಶೈವ ಲಿಂಗಾಯತ ಸಮುದಾಯದವರು ಸಮಾಜದ ಸಂಘಟನೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಬೇರುಗಂಡಿ ಮಠದ ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಆಲ್ದೂರಲ್ಲಿ ಆಯೋಜಿಸಿದ್ದ ಹೋಬಳಿ ವ್ಯಾಪ್ತಿಯ ವೀರಶೈವ ಲಿಂಗಾಯತ ಸಮಾಜದ ಸರ್ವಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ದೋಷ ಹುಡುಕುವ ಬದಲು, ನಾನು ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಭಾವನೆ ಬರಬೇಕು. ಸಮಾಜದವರು ಸಂಘಟನೆಗೆ ಮಹತ್ವ ನೀಡಬೇಕು ಎಂದು ಹೇಳಿದರು.
ನಿಕಟ ಪೂರ್ವ ಅಧ್ಯಕ್ಷ ಇ.ಸಿ.ಉಮೇಶ್ ಮಾತನಾಡಿ, ಸಮಾಜದವರು ನಿವೇಶನ ವ್ಯವಸ್ಥೆ ಮಾಡಿದರೆ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ.ದೇಣಿಗೆ ನೀಡಲಾಗುವುದು. ನಾನು ಅಧ್ಯಕ್ಷನಾದಾಗ ಸಮುದಾಯ ಭವನ ನಿರ್ಮಿಸುವ ಆಸೆ ಇತ್ತು ಆದರೆ ಇದು ಸಾಧ್ಯವಾಗಲಿಲ್ಲ . ಸಮಾಜದವರು ಸಂಘಟಿತರಾಗುವ ಸಮಯ ಬಂದಿದ್ದು ಎಲ್ಲರೂ ಸಂಘಟನೆಗೆ ಒತ್ತುನೀಡ ಬೇಕು ಎಂದರು.
ಹೋಬಳಿ ವೀರಶೈವ ಸಮಾಜದ ನೂತನ ಅಧ್ಯಕ್ಷ ಕೆ.ಎಸ್.ಮಹೇಶ್ ಮಾತನಾಡಿ, ಸಮಾಜ ಪಂಗಡಗಳ ಒಳಸುಳಿಗೆ ಸಿಗದೆ, ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಎಲ್ಲ ಸಮುದಾಯಗಳು ಸಂಘಟಿತರಾಗುತಿದ್ದಾರೆ. ನಾವು ನಮ್ಮ ಹಕ್ಕುಗಳಿಗೆ ಹೋರಾಡುವ ಸಮಯ ಬಂದಿದ್ದು, ಇದಕ್ಕೆ ಸಮಾಜದ ಸಹಕಾರ ಮುಖ್ಯ ಎಂದರು.
2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ 80ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ 5 ವಿದ್ಯಾರ್ಥಿಗಳು, ಬೇರುಗಂಡಿ ಮಠದ ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಆಶಾ, ನಿಕಟ ಪೂರ್ವ ಅಧ್ಯಕ್ಷ ಇ.ಸಿ.ಉಮೇಶ್ ಅವರನ್ನು ಸನ್ಮಾನಿಸಲಾಯಿತು. ಆಶಾ ಹಾಗೂ ಉಮೇಶ್ ಅವರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು. ಹೋಬಳಿ ಸಮಾಜದ ಅಧ್ಯಕ್ಷ ಕೆ.ಎಸ್ ಮಹೇಶ್, ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್, ಪುಟ್ಟಸ್ವಾಮಿ, ಪ್ರಕಾಶ್, ಶಿವಣ್ಣ, ಗಂಗಾಧರಯ್ಯ, ಧರ್ಮೇಶ್,ಭಗತ್, ಉಮೇಶ್, ನವೀನ್, ಬಸವರಾಜು ಇದ್ದರು.