ನರಗುಂದ: ಹಾಕಿ ಮಾಂತ್ರಿಕ ಧ್ಯಾನಚಂದ್ ಅವರ ಸಾಧನೆ ಎಲ್ಲ ಕ್ರೀಡಾಪಟುಗಳಿಗೆ ಆದರ್ಶವಾಗಬೇಕು. ಅವರ ಜೀವನ ಚರಿತ್ರೆ ಅರಿಯಬೇಕು. ಪಾಠದಷ್ಟೇ ಆಟಕ್ಕೂ ಆದ್ಯತೆ ನೀಡಿ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಬೇಕು ಎಂದು ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಹೇಳಿದರು.
ಲಯನ್ಸ್ ಶಿಕ್ಷಣ ಸಂಸ್ಥೆಯ ಲಯನ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಲಯನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಗಳ ಆಶ್ರಯದಲ್ಲಿ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನರಗುಂದದ ನಂ.2ರ ಗ್ರೂಪ್ ಮಟ್ಟದ ಪ್ರಾಥಮಿಕ ಶಾಲೆಗಳು, ಬನಹಟ್ಟಿ ಗ್ರೂಪ್ ಮಟ್ಟದ ವಿವಿಧ ಪ್ರೌಡ ಶಾಲೆಗಳ ಕ್ರೀಡಾಕೂಟ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಹೊಂದುವುದರ ಮೂಲಕ ಮಾನಸಿಕವಾಗಿ ಸಬಲರಾಗುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರೀಡಾಮನೋಭಾವ ಅಗತ್ಯವಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು.ಶಿಕ್ಷಕರು, ಪಾಲಕರು ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂದರು.
ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ. ಕಲಹಾಳ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಧನೆಗೆ ತಂದೆ-ತಾಯಿಗಳ ನಿರಂತರ ಪ್ರೋತ್ಸಾಹ ಅಗತ್ಯವಿದೆ. ನಿವೃತ್ತಿಯಾಗಿ 10 ವರ್ಷ ಗತಿಸಿದರೂ ಇಂದಿಗೂ ಕ್ರೀಡಾಪಟುಗಳನ್ನು ತರಬೇತುಗೊಳಿಸುತ್ತಿರುವೆ. ಆಸಕ್ತಿ, ಸೇವಾ ಮನೋಭಾವನೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.
ಕ್ರೀಡಾಜ್ಯೋತಿ ಸ್ವೀಕರಿಸಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಆರ್. ನಿಡಗುಂದಿ ಮಾತನಾಡಿದರು. ಏಸಿಯನ್ ಕಲ್ಚರಲ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪುರಸ್ಕೃತ ಎಂ.ಎಂ. ಕಲಹಾಳ ಅವರನ್ನು ಸನ್ಮಾನಿಸಲಾಯಿತು. ಜಿ.ಬಿ. ಕುಲಕರ್ಣಿ, ಸಿ.ಎಸ್. ಸಾಲೂಟಗಿಮಠ ಇತರರಿದ್ದರು.
ಲಯನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಎಸ್.ಜಿ.ಜಕ್ಕಲಿ ಸ್ವಾಗತಿಸಿದರು. ಡಾ. ಬಿ.ವೈ. ಹಲಕುರ್ಕಿ ನಿರೂಪಿಸಿದರು. ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ ವಂದಿಸಿದರು.