ಬಂಕಾಪುರ: ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡುವಂತೆ ಉಪನ್ಯಾಸಕರಿಗೆ ಕಾಲೇಜಿನ ಪ್ರಾಚಾರ್ಯ ಒತ್ತಾಯ ಮಾಡುತ್ತಿರುವ ವಿಡಿಯೋ ಪಟ್ಟಣದಲ್ಲಿ ವೈರಲ್ ಆಗಿದ್ದು, ಇದರಿಂದ ಕಾಲೇಜ್‌ನಲ್ಲಿ ನಡೆಯುತ್ತಿರುವ ಪರೀಕ್ಷೆಗಳ ಪಾರದರ್ಶಕತೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿಸುವಂತಾಗಿದೆ.
ಪಟ್ಟಣದ ಕರ್ನಾಟಕ ಕೀರ್ತಿ ಪಪೂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಧರ ಕಾರಗಿ ನಕಲು ಮಾಡಲು ಅವಕಾಶ ಮಾಡಿ ಕೊಡುವಂತೆ ಉಪನ್ಯಾಸಕರಿಗೆ ಒತ್ತಡ ಹಾಕುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.ಜಿಲ್ಲೆಯಾದ್ಯಂತ ಫೆ. 12ರಿಂದ ಪಿಯುಸಿ ಪ್ರಥಮ ವರ್ಷದ ಪರೀಕ್ಷೆಗಳು ಆರಂಭಗೊಂಡಿದ್ದು ಫೆ. 27ಕ್ಕೆ ಮುಕ್ತಾಯಗೊಳ್ಳಲಿವೆ. ಈ ಮಧ್ಯೆ ಬಂಕಾಪುರ ಪಟ್ಟಣದ ಕರ್ನಾಟಕ ಕೀರ್ತಿ ಪ.ಪೂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಫೆ. 13 ಮತ್ತು ಫೆ. 14 ರಂದು ಮುಕ್ತಾಯಗೊಂಡ ಸಮಾಜಶಾಸ್ತ್ರ ಮತ್ತು ಬಿಜಿನೆಸ್ ಸ್ಟಡಿಸ್ ಪರೀಕ್ಷೆ ವೇಳೆಯಲ್ಲಿ ‘ವಿದ್ಯಾರ್ಥಿಗಳಿಗೆ 20ರಿಂದ 30 ಅಂಕಗಳನ್ನು ಹೇಳಿ ಕೊಡಲು ಅವಕಾಶ ಕೊಡಿ’ ಎಂದು ಪ್ರಾಚಾರ್ಯ ಶಶಿಧರ ಕಾರಗಿ ಉಪನ್ಯಾಸಕರ ಮೇಲೆ ಒತ್ತಡ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಲೇಜ್ ಆರಂಭದ ದಿನಗಳಲ್ಲಿ ಸರಿಯಾಗಿ ಉಪನ್ಯಾಸ ಮಾಡಲು ಕ್ರಮ ಕೈಗೊಳ್ಳದ ಪ್ರಾಚಾರ್ಯ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ವಾಮ ಮಾರ್ಗದ ಮೂಲಕ ಪಾಸ್ ಮಾಡಿಸಲು ಉಪನ್ಯಾಸಕರ ಮೇಲೆ ಒತ್ತಡ ಹಾಕುತ್ತಿರುವುದು ಶಿಕ್ಷಣ ಕ್ಷೇತ್ರಕ್ಕೆ ಮಾಡಿದ ಅಪಚಾರವಾಗಿದೆ. ಅಂತಹವರ ಮೇಲೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.
ಬಂಕಾಪುರದ ಕರ್ನಾಟಕ ಕೀರ್ತಿ ಪಪೂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯ ನಕಲು ಮಾಡಲು ಉಪನ್ಯಾಸಕರಿಗೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾದ ವಿಡಿಯೋಗೆ ಸಂಬಂಧಿಸಿದಂತೆ ಕಾಲೇಜ್ ಪ್ರಾಚಾರ್ಯ ಮತ್ತು ಉಪನ್ಯಾಸಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.>ಉಮೇಶಪ್ಪ, ಡಿಡಿಪಿಒ ಹಾವೇರಿ ನಮ್ಮ ಕಾಲೇಜನದ್ದು ಎನ್ನಲಾದ ವಿಡಿಯೋ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಎಲ್ಲ ಸಿಬ್ಬಂದಿ ಹಾವೇರಿ ಡಿಡಿಪಿಒ ಕಚೇರಿಗೆ ಹೋಗಿದ್ದಾರೆ. ಅವರು ಬಂದ ನಂತರ ಸಭೆ ಕರೆದು ನಡೆದ ವಿಷಯದ ಬಗ್ಗೆ ಕೂಲಂಕಶವಾಗಿ ಪರಿಶೀಲನೆ ಮಾಡಲಾಗುವುದು.>ಜಗದೀಶ ಕುರುಂದವಾಡ,ಅಧ್ಯಕ್ಷರು ಕರ್ನಾಟಕ ಕೀರ್ತಿ ವಿದ್ಯಾ ಸಂಸ್ಥೆ(ರಿ). ಬಂಕಾಪುರ