ಜಿಲ್ಲೆ

ಜೆಡಿಎಸ್‌ಗೆ ಮತಕೊಟ್ಟರೆ ಕಾಂಗ್ರೆಸ್‌ಗೆ ಕೊಟ್ಟಂತೆ: ಮೋದಿ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ತುಷ್ಟೀಕರಣದ, ವೋಟ್ ಬ್ಯಾಂಕ್ ರಾಜಕಾರಣದ ಗುಲಾಮರಾಗಿರುವ ಕಾಂಗ್ರೆಸ್‌ನಿಂದ ಕರ್ನಾಟಕ ವಿಕಾಸ ಅಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನವ ಕರ್ನಾಟಕದ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್- ಜೆಡಿಎಸ್ ಎರಡರ ಆಟವನ್ನು ಕರ್ನಾಟಕದ ಜನರು ನೋಡಿದ್ದಾರೆ. ಜೆಡಿಎಸ್‌ಗೆ ಮತಕೊಟ್ಟರೆ ಅದು ಕಾಂಗ್ರೆಸ್‌ಗೆ ಕೊಟ್ಟಂತೆ.ಜೆಡಿಎಸ್‌ಗೆ ಕೊಡುವ ಪ್ರತೀ ಮತವು ಅಸ್ಥಿರ ಸರ್ಕಾರಕ್ಕೆ ಕಾರಣವಾಗಲಿದೆ. ಹಾಗಾಗಿ, ಸುಸ್ಥಿರ, ಸಮರ್ಥ ಸರ್ಕಾರಕ್ಕೆ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರವಾಗಲಿ ಎಂದು ಮೋದಿ ಅಬ್ಬರಿಸಿದರು.

85% ಕಾಂಗ್ರೆಸ್ ವಾಲೇ !: ಕಾಂಗ್ರೆಸ್ಸಿಗರದ್ದು 85% ಕಮೀಷನ್ ಸರ್ಕಾರ. ಇದು ಮೋದಿ ಮಾತಲ್ಲ. ಕಾಂಗ್ರೆಸ್ ನೇತಾರ, ಪ್ರಧಾನಿ ಆಗಿದ್ದ ರಾಜೀವ್‌ಗಾಂಧಿ ಅವರೇ ಸಾರ್ವಜನಿಕವಾಗಿ ಹೇಳಿದ ಮಾತು. ಯಾವುದೇ ಯೋಜನೆಗೆ 100 ಪೈಸೆ ಅನುದಾನ ನೀಡಿದರೆ ಕೇವಲ 15 ಪೈದೆ ಮಾತ್ರ ಹಳ್ಳಿಗೆ ತಲುಪುತ್ತೆ ಎಂಬುದನ್ನು ರಾಜೀವ್‌ಗಾಂಧಿ ಹೇಳಿದ್ದನ್ನು ಪ್ರಸ್ತಾಪಿಸುವ ಮೂಲಕ ಪರೋಕ್ಷವಾಗಿ 40% ಕಮೀಷನ್ ಸರ್ಕಾರ ಎಂಬ ಕಾಂಗ್ರೆಸ್ ಆರೋಪಕ್ಕೆ ಮೋದಿ ತಿರುಗೇಟು ಕೊಡುವ ಪ್ರಯತ್ನ ಮಾಡಿದರು.

ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಜಿ.ಎಸ್.ಬಸವರಾಜು, ರಾಜ್ಯಸಭಾ ಸದಸ್ಯ ಜಗ್ಗೇಶ್, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲಜಯರಾಂ, ಡಾ.ಸಿ.ಎಂ.ರಾಜೇಶ್‌ಗೌಡ, ಮಾಜಿ ಶಾಸಕ ಬಿ.ಸುರೇಶಗೌಡ, ಬಿಜೆಪಿ ಅಭ್ಯರ್ಥಿಗಳಾದ ಎಸ್.ಡಿ.ದಿಲೀಪ್‌ಕುಮಾರ್, ಬಿ.ಎಚ್.ಅನಿಲ್‌ಕುಮಾರ್, ಎಲ್.ಸಿ.ನಾಗರಾಜು, ಕೃಷ್ಣನಾಯಕ್, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಎಂಎಲ್ಸಿ ಕೆ.ಎಸ್.ನವೀನ್, ತುಮಕೂರು, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎಚ್.ಎಸ್.ರವಿಶಂಕರ್, ಬಿ.ಕೆ.ಮಂಜುನಾಥ್ ಉಪಸ್ಥಿತರಿದ್ದರು.