ಜಿಲ್ಲೆ

ಕಿರು ಉದ್ಯಮಗಳ ಸ್ಥಾಪನೆಯಿಂದ ಉದ್ಯೋಗವಕಾಶ ಹೆಚ್ಚಳ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕೇಂದ್ರ ಸರ್ಕಾರ ರೈತರನ್ನು ಉದ್ಯಮಿಗಳನ್ನಾಗಿಸಿ ಅವರ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ, ಸಂಸ್ಕರಿಸಿ, ದೇಶ ಮತ್ತು ವಿದೇಶಗಳಿಗೆ ರಪ್ತು ಮಾಡುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಕಿರು ಉದ್ಯಮಗಳನ್ನು ಸ್ಥಾಪಿಸಲು ಜಿಲ್ಲೆಯ ಉದ್ದಿಮೆದಾರರು ಆಸಕ್ತಿ ತೋರಿಸಬೇಕು. ಇದರಿಂದ ಉದ್ಯೋಗಾವಕಾಶಗಳೂ ಹೆಚ್ಚಲಿವೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣದ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ರೈತರ ದಿನಾಚರಣೆಯ ಅಂಗವಾಗಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಮಾಹಿತಿ ಕಾರ್ಯಾಗಾರ ಹಾಗೂ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಆಹಾರ ಸಂಸ್ಕರಣಾ ಉದ್ದಿಮೆ ಬಲಪಡಿಸುವ ಅಗತ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಜಿಲ್ಲೆಯ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

250ಕ್ಕೂ ಅರ್ಜಿ ಮಂಜೂರು

ಜಿಲ್ಲೆಯಲ್ಲಿ ಸುಮಾರು 250 ಕ್ಕೂ ಹೆಚ್ಚು ಉದ್ದಿಮೆದಾರ ಅರ್ಜಿ ಮಂಜೂರು ಮಾಡಲಾಗಿದೆ. ಯೋಜನೆಯ ಸಹಾಯಧನವನ್ನು ಪಡೆಯಲು ಸರ್ಕಾರದ ಯಾವುದೇ ಇಲಾಖೆಗಳಿಗೆ ಅರ್ಜಿ ಹಾಕಿ ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ಇದಕ್ಕಾಗಿಯೇ ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದ್ದು, ಅವರು ಬ್ಯಾಂಕ್​ ಸಾಲದಿಂದ ಪ್ರಾರಂಭಿಸಿ, ಸಹಾಯಧನ ಲಭಿಸುವವರೆಗೂ ಸಹಕಾರ ನೀಡಲಿದ್ದಾರೆ ಎಂದರು.

ಶಾಸಕ ಕಿರಣ್​ ಕುಮಾರ್​ ಕೊಡ್ಗಿ ಮಾತನಾಡಿ, ರೈತ ನಮ್ಮ ದೇಶದ ಬೆನ್ನೆಲುಬು. ರೈತರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಪರಿಣಾಮಕಾರಿ ಅನುಷ್ಠಾನ ಮಾಡಿದಾಗ ಮಾತ್ರ ನಿಗದಿತ ಗುರಿ ಸಾಧಿಸಬಹುದು ಎಂದರು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್​ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಮೌಲ್ಯವನ್ನು ಹೆಚ್ಚಿಸುವುದರೊಂದಿಗೆ ಅವರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್​.ಕೆ ಶಿವಕುಮಾರ್​ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಕೃಷಿ ಉಪಕರಣ, ತುಂತುರು ನೀರಾವರಿ ಘಟಕದ ಮಂಜೂರಾತ್ರಿ ಪತ್ರ, ಪಿ.ಎಂ.ಎಫ್​.ಎಂ.ಇ ಯೋಜನೆಯ ಸಾಲ ಮಂಜೂರಾತಿ ಪತ್ರ, ಮಣ್ಣು ಆರೋಗ್ಯ ಚೀಟಿ, ಸಮಗ್ರ ಕೃಷಿ ಪದ್ಧತಿ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಎಸ್​ಪಿ ಪಿ.ಎ ಹೆಗಡೆ, ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸೀತಾರಾಮ, ಶೆಟ್ಟಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಲೀಡ್​ ಬ್ಯಾಂಕ್​ ಮ್ಯಾನೆಜರ್​ ಹರೀಶ್​, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಅಂಜನಾದೇವಿ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ ಸ್ವಾಗತಿಸಿ, ಪ್ರಶಾಂತ್​ ಹಾವಂಜೆ ನಿರೂಪಿಸಿ, ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕ್​ ವಂದಿಸಿದರು.