ಮಂಡ್ಯ: ಜಿಲ್ಲೆಯಲ್ಲಿರುವ ಅಲ್ಪ ಸಂಖ್ಯಾತರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದ್ದರಿಂದ ಸರ್ಕಾರದಿಂದ ದೊರೆಯುವ ಎಲ್ಲ ಯೋಜನೆಗಳು ಅಲ್ಪ ಸಂಖ್ಯಾತರಿಗೆ ಸರಿಯಾದ ರೀತಿಯಲ್ಲಿ ಸಿಗುವಂತೆ ಅಧಿಕಾರಿಗಳು ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ 15 ಅಂಶಗಳ ಕಾರ್ಯಕ್ರಮ ಇದೆ. ಆದ್ದರಿಂದ ಅಲ್ಪ ಸಂಖ್ಯಾತರಿಗೆ ದೊರೆಯುವ ಯೋಜನೆ, ಸಾಲ, ಸೌಲಭ್ಯ ಸವಲತ್ತುಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಿ ವ್ಯಾಪಕ ಪ್ರಚಾರ ಮಾಡಿ ಎಂದರು.
ಜಿಲ್ಲೆಯಲ್ಲಿರುವ ಎಲ್ಲ ಇಲಾಖೆಗಳಿಂದ ಅಲ್ಪ ಸಂಖ್ಯಾತರಿಗೆ ಸರ್ಕಾರದಡಿ ಬರುವ ಯೋಜನೆಗಳಿಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ನೀಡಬೇಕು. ಸ್ವ ಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡಿ ಸ್ವಯಂ ಉದ್ಯೋಗ ಕಲ್ಪಿಸಿ. ಅವರು ಯಾವುದೇ ಸೌಲಭ್ಯದಿಂದ ವಂಚಿತರಾಗಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಗಂಗಾಧರಸ್ವಾಮಿ, ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್‌ಕುಮಾರ್, ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖೆಯ ಕಲ್ಯಾಣಾಧಿಕಾರಿ ಮಧುಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ರಾಜಮೂರ್ತಿ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಮೋಹನ್‌ಕುಮಾರ್ ಇತರರಿದ್ದರು.