ಜಿಲ್ಲೆ

ನ.28ಕ್ಕೆ ಪ್ರಧಾನಿ ಮೋದಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ

ಪರ್ಯಾಯ ಪುತ್ತಿಗೆ ಮಠದ ಬೃಹತ್​ ಗೀತೋತ್ಸವದಲ್ಲಿ ಭಾಗಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶಯ ಹಾಗೂ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ನ.28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.

ಸುಗುಣೇಂದ್ರ ಶ್ರೀಗಳ ತೃತೀಯ ಪರ್ಯಾಯದ ಸಂದರ್ಭದಲ್ಲಿ (2008ರ ಮೇ 8) ಉಡುಪಿಗೆ ಭೇಟಿ ನೀಡಿದ್ದ ಮೋದಿ.

ತಮ್ಮ ಚತುರ್ಥ ಪರ್ಯಾಯವನ್ನು ಕೋಟಿ ಗೀತಾ ಲೇಖನ ಯಜ್ಞಕ್ಕೆ ಮೀಸಲಿಟ್ಟಿರುವ ಶ್ರೀಗಳು, ಅದರ ಮುಂದುವರಿದ ಭಾಗವಾಗಿ ತಿಂಗಳ ಪರ್ಯಂತ ಬೃಹತ್​ ಗೀತೋತ್ಸವ ಆಯೋಜಿಸಿದ್ದಾರೆ. ನ.8ರಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದು, ನ.28ರಂದು ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ.

ಅಂದು ಮಧ್ಯಾಹ್ನ 12 ಗಂಟೆಗೆ ಮಠಕ್ಕೆ ಮೋದಿ ಆಗಮಿಸಲಿದ್ದು, ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ದರ್ಶನದ ಬಳಿಕ ಮಠದ ವಾಹನ ಪಾರ್ಕಿಂಗ್​ ಪರಿಸರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ. ನ.8ರಿಂದ ತಿಂಗಳ ಕಾಲ ಪ್ರತಿದಿನವೂ ನಡೆಯಲಿರುವ ಗೀತೋತ್ಸವದಲ್ಲಿ ನಾಡಿನ ಪ್ರಮುಖ ಸ್ವಾಮೀಜಿಗಳು, ಪ್ರಮುಖ ನಾಯಕರು ಹಾಗೂ ದೇಶ-ವಿದೇಶದ ಗಣ್ಯರು ಆಗಮಿಸಲಿದ್ದಾರೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.