ಸಾಗರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ರಕ್ತದಾನ ಶಿಬಿರ ಆಯೋಜಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.
ನಗರದ ಉಪವಿಭಾಗೀಯ ಆಸ್ಪತ್ರೆ ಆವರಣದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಭಾನುವಾರ ಬಿಜೆಪಿ ಯುವ ಮೋರ್ಚಾದಿಂದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.
ಮೋದಿ ಅವರು ಯುವ ಸಮೂಹಕ್ಕೆ ಪ್ರೇರಣೆ ಆಗಿದ್ದಾರೆ. ಅವರ ಜನ್ಮದಿನವನ್ನು ಇಂತಹ ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸುವುದು ಅನುಕರಣೀಯವಾದದ್ದು. ಪ್ರಸ್ತುತ ರಕ್ತದ ಅಗತ್ಯ ಹೆಚ್ಚು ಇದೆ. ಯುವ ಮೋರ್ಚಾ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಇಂತಹ ಶಿಬಿರ ಆಯೋಜಿಸುತ್ತಿರುವುದು ಸ್ವಾಗತಾರ್ಹ ಸಂಗತಿ. ಮೂರು ತಿಂಗಳಿಗೊಮ್ಮೆ ರಕ್ತ ನೀಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ರಕ್ತದಾನದ ಬಗ್ಗೆ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶ ಪ್ರಸಾದ್ ಮಾತನಾಡಿ, ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆ. 18ರಿಂದ ಅ.2ರವರೆಗೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಚ್ಛತಾ ಅಭಿಯಾನ, ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ, ಬೃಹತ್ ರಕ್ತದಾನ ಶಿಬಿರ ಸೇರಿದಂತೆ 15 ದಿನಗಳ ಕಾಲ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಯುವ ಮೋರ್ಚಾ ಅಧ್ಯಕ್ಷ ಅರುಣ ಕುಗ್ವೆ, ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಸವಿತಾ ವಾಸು, ನಗರಸಭೆ ಸದಸ್ಯೆ ಮೈತ್ರಿ ಪಾಟೀಲ್, ಪ್ರಮುಖರಾದ ಕೆ.ಎಸ್.ಗೌತಮ್, ಕೆ.ವಿ.ಪ್ರವೀಣ್, ಪರಶುರಾಮ್, ಕೆ.ಸತೀಶ್, ಡಾ. ಬಿ.ಜಿ.ಸಂಗಮ್, ರಾಜೇಂದ್ರ ಪೈ ಇತರರಿದ್ದರು.