ಜಿಲ್ಲೆ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುತ್ತೂರು ಮಠದ ಬಗ್ಗೆ ಭಕ್ತಿ ಹೆಚ್ಚಿದೆ

ಮೈಸೂರು: ಸುತ್ತೂರು ಮಠ ಆಧ್ಯಾತ್ಮಿಕ ಚಟುವಟಿಕೆ ಮೂಲಕ ವಿಶ್ವವ್ಯಾಪಿ ಜ್ಞಾನ ಪಸರಿಸಿದೆ. ಕನ್ನಡ ನಾಡು ಮಠ ಮಾನ್ಯಗಳ ನಾಡು. ಪರಂಪರೆಯ ಮಹಾಕೊಂಡಿಯಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ಸೇವೆ ಸಲ್ಲಿಸಿದೆ. ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ಸಲ್ಲಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಣ್ಣಿಸಿದರು.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುತ್ತೂರು ಮಠದ ಬಗ್ಗೆ ಭಕ್ತಿ ಹೆಚ್ಚಿದೆ. ಹಾಗೆಯೇ ಅಮಿತ್ ಷಾ ಅವರು ಗೃಹ ಮಂತ್ರಿಯಾಗಿ ಮಾತ್ರವಲ್ಲ, ಮಠದ ಸದ್ಭಕ್ತರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನದಲ್ಲಿ ಅತಿಹೆಚ್ಚು ಮಾರ್ಗದರ್ಶನ ಮಾಡಿದವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಹಾಗೂ ಸುತ್ತೂರು ಶ್ರೀಗಳು ಎಂದು ಹೇಳಿದರು.

ದೇಶದ ಅಭಿವೃದ್ಧಿಗೆ ಅಮಿತ್ ಷಾ ಸಂಕಲ್ಪ ಮಾಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಆಗಿರುವುದೇ ಅಭಿವೃದ್ಧಿಯ ಸಂಕೇತ. ಅಂತಹವರ ಆಗಮನದಿಂದ ಇಡೀ ರಾಜ್ಯದಲ್ಲಿ ಸಂಚಲನ ಉಂಟು ಮಾಡಿತು. ಅದು ರಾಜಕೀಯ ಮಾತ್ರ ಅಲ್ಲ, ಎಲ್ಲ ಹಂತದಲ್ಲಿಯೂ ಉಂಟಾಗಿದೆ ಎಂದು ತಿಳಿಸಿದರು.