ಜಿಲ್ಲೆ

ಆಶಾವಾದ ಎಲ್ಲರ ಗೆಲುವಿಗೆ ಬುನಾದಿ

ಟಿ. ಶ್ರೀನಿವಾಸ್ ಹೊನ್ನಾಳಿ: ಶ್ರದ್ಧ್ದೆ, ಪರಿಶ್ರಮ ಹಾಗೂ ಸತತ ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಬಹುದು ಎಂದು ಜಗತ್ತಿಗೆ ತೋರಿಸಬೇಕಾದರೆ ನಾವು ಮೊದಲು ಆಶಾವಾದಿಗಳಾಗಿರಬೇಕು ಎನ್ನುತ್ತಾರೆ ಫ್ರಾನ್ಸ್‌ನ ಭಾರತದ ಡೆಪ್ಯೂಟಿ ಚೀಫ್ ಆಫ್ ಮಿಷನ್ ಡಾ.ಕೆ.ಎಂ. ಪ್ರಫುಲ್ಲಚಂದ್ರ ಶರ್ಮ.

ಅವರು ಹೊನ್ನಾಳಿಯ ತಮ್ಮ ನಿವಾಸದಲ್ಲಿ ವಿಜಯವಾಣಿಯೊಂದಿಗೆ ಮಾತನಾಡಿ, ಶ್ರದ್ಧ್ದೆಯಿಂದ ಸತತ ಅಧ್ಯಯನ ಮಾಡಿದರೆ ಗೆಲುವು ನಮ್ಮ ಜೇಬಿನಲ್ಲೇ ಇರುತ್ತದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ತಮಗೆ ಅರ್ಥವಾಗದ ವಿಷಯವನ್ನು ಶಿಕ್ಷಕರಿಂದ ಮತ್ತೊಮ್ಮೆ ಕೇಳಿ ತಿಳಿದುಕೊಳ್ಳಬೇಕು. ಪ್ರಶ್ನಿಸದೇ ಇದ್ದರೆ ನೀವು ಯಶಸ್ಸು ಕಾಣುವುದಿಲ್ಲ, ಮೊದಲು ಪ್ರಶ್ನೆ ಮಾಡುವುದನ್ನು ಕಲಿಯಬೇಕು ಎಂದರು.

ಭಾರತಕ್ಕೆ ವಿಶೇಷ ಗೌರವ: ಜಗತ್ತಿನೆಲ್ಲೆಡೆ ಭಾರತ ಅಂದಾಕ್ಷಣ ಅತಿಯಾದ ಗೌರವ ಸಲ್ಲಿಸುತ್ತಾರೆ. ಕಾರಣ, ಭಾರತೀಯರು ವಿಶ್ವದ ಹಲವಾರು ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಭೆ, ಅಭಿವೃದ್ಧಿ ಚಿಂತನೆ ಹಾಗೂ ನಮ್ಮ ರಾಷ್ಟ್ರದ ಬಗ್ಗೆ ಇರುವ ದೇಶಾಭಿಮಾನದಿಂದ ಭಾರತೀಯರು ಎಂದರೆ ಎಲ್ಲೆಡೆ ಹೆಚ್ಚು ಗೌರವ ಎಂದು ಪ್ರತಿಪಾದಿಸಿದರು.

ಭಾರತೀಯರ ಬಗ್ಗೆ ಇಟ್ಟಿರುವ ಗೌರವಕ್ಕೆ ಕಾರಣ ಇಲ್ಲಿನ ಶಿಕ್ಷಣದ ವ್ಯವಸ್ಥೆ. ಮಕ್ಕಳಿಗೆ ಕೊಡುವ ಸಂಸ್ಕಾರಯುತ ಶಿಕ್ಷಣ. ವಿದೇಶಿಯರೂ ಕೂಡ ಶಿಕ್ಷಣಕ್ಕಾಗಿ ಭಾರತದ ಕಡೆ ಮುಖ ಮಾಡುತ್ತಿದ್ದಾರೆ. ಕಿಟಕಿ ತೆಗೆದರೆ ಎಲ್ಲ ಕಡೆ ಬೆಳಕು ಪಸರಿಸುವ ಹಾಗೆ ಜಗತ್ತಿನ ಹಲವು ದೇಶಗಳು ಅಭಿವೃದ್ಧಿ ಹೊಂದಿವೆ. ಅಲ್ಲಿಂದ ಒಳ್ಳೆಯ ಅಂಶಗಳನ್ನು ಪಡೆದು ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದರು.

ನಮ್ಮ ದೇಶವಾಸಿಗಳು ವಿದೇಶ ಪ್ರವಾಸ ಅಥವಾ ಇನ್ನಿತರ ಉದ್ದೇಶಗಳಿಗೆ ವಿದೇಶಕ್ಕೆ ಬಂದಾಗ ಅನೇಕ ಬಾರಿ ಅಜಾಗರೂಕತೆಯಿಂದ ಪಾಸ್‌ಪೋರ್ಟ್, ವೀಸಾ ಕಳೆದುಕೊಳ್ಳುತ್ತಾರೆ. ಹಾಗಾಗಿ, ಮೊದಲು ಅಗತ್ಯ ಎನ್ನಿಸಿದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ವಿದೇಶದಲ್ಲಿ ತುಂಬ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಸಮಸ್ಯೆ ಎದುರಾದಾಗ ಭಾರತದ ರಾಯಭಾರಿ ಕಚೇರಿ ಸಂಪರ್ಕಿಸಿದರೆ ಅದನ್ನು ಅಲ್ಲಿ ಬಗೆಹರಿಸುತ್ತೇವೆ. ಭಾರತೀಯ ರಾಯಭಾರಿ ಕಚೇರಿಯಿಂದ ಸಹಾಯ ದೊರೆತಿಲ್ಲ ಎಂಬ ದೂರು ಇದುವರೆಗೂ ಕೇಳಿ ಬಂದಿಲ್ಲ ಎಂದರು.

ಫ್ರಾನ್ಸ್‌ನಲ್ಲಿ ಕೋವಿಡ್‌ನ 2 ನೇ ಅಲೆ ಕಾಡಿದ ವೇಳೆ ಭಾರತೀಯ ವಿದ್ಯಾರ್ಥಿಗಳು, ಪ್ರವಾಸಿಗರ ಸುರಕ್ಷತೆಗೆ ಹೆಚ್ಚು ಕಾಳಜಿ ವಹಿಸಿದ್ದು ನಮ್ಮ ಭಾರತೀಯ ರಾಯಭಾರಿ ಕಚೇರಿ. ಆ ಸಂದರ್ಭದಲ್ಲಿ ಭಾರತಕ್ಕೆ ಹೋಗುತ್ತೇವೆ ಎಂದವರೆಲ್ಲರನ್ನೂ ತತ್‌ಕ್ಷಣ ಏರ್ ಇಂಡಿಯಾ ವಿಮಾನದಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಟ್ಟೆವು ಎಂದು ಅವರು ವಿವರಿಸಿದರು.

ಹೊನ್ನಾಳಿ ನಿವಾಸಿ..: ಡಾ.ಕೆ.ಎಂ. ಪ್ರಫುಲ್ಲಚಂದ್ರಶರ್ಮ ಅವರು ಹೊನ್ನಾಳಿಯ ಟಿಬಿ ವೃತ್ತದ ನಿವಾಸಿ. ಪೇಟೆ ಶಾಲೆಯಲ್ಲಿ 1 ರಿಂದ 4ನೇ ತರಗತಿವರೆಗೆ, 5ನೇ ತರಗತಿವರೆಗೆ ಹೊನ್ನಾಳಿಯ ಟಿ.ಬಿ. ಶಾಲೆ, 5 ರಿಂದ 10ನೇ ತರಗತಿವರೆಗೆ ನವೋದಯದಲ್ಲಿ ಶಿಕ್ಷಣ, ಪಿಯುಸಿ ಹೊನ್ನಾಳಿ ಹಿರೇಕಲ್ಮಠ, ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಬಿಎಎಂಎಸ್ ಶಿಕ್ಷಣ ಪಡೆದು, 2006 ರಲ್ಲಿ ಯುಪಿಎಸ್‌ಸಿ ಪಾಸಾದರು.

ದೆಹಲಿ ರಾಯಭಾರಿ ಕಚೇರಿ, ಬೆಲ್ಜಿಯಂ, ನೇಪಾಳ ಹಾಗೂ ಇದೀಗ ಫ್ರಾನ್ಸ್‌ನ ಭಾರತದ ರಾಯಭಾರಿ ಕಚೇರಿಯಲ್ಲಿ ಡೆಪ್ಯೂಟಿ ಚೀಫ್ ಆಫ್ ಮಿಷನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಸೌಮ್ಯಾ ಸಿ. ಅವರು ಫ್ರಾನ್ಸ್‌ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕಾರ್ಯದರ್ಶಿಯಾಗಿದ್ದಾರೆ.