ಮೈಸೂರು: ವರ್ಗಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ (ಪಿಎಸ್‌ಟಿ) ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಹಿತರಕ್ಷಣಾ ವೇದಿಕೆಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ಶಿಕ್ಷಕರ ವರ್ಗಾವಣೆಗಾಗಿ ಕೌನ್ಸೆಲಿಂಗ್ ನಡೆಯುತ್ತಿರುವ ನಗರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರ (ಡಿಡಿಪಿಐ)ಕಚೇರಿ ಎದುರು ಜಮಾವಣೆಗೊಂಡ ಪಿಎಸ್‌ಟಿ ಶಿಕ್ಷಕರು ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
2015ಕ್ಕಿಂತ ಮುಂಚೆ 1ರಿಂದ 8ರ ತರಗತಿ ಬೋಧನೆ ಹುದ್ದೆಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಣಿಸಿ ನೇಮಿಸಿಕೊಳ್ಳಲಾಗಿದೆ. 25-30 ವರ್ಷಗಳಿಂದ 12ನೇ ತರಗತಿ ವರೆಗೂ ಬೋಧಿಸಲಾಗುತ್ತಿದೆ. ಈ ನಡುವೆ, ಈ ಶಿಕ್ಷಕರನ್ನು ಹೊಸ ವೃಂದ ನಿಗದಿ ಹಾಗೂ 2017ರಲ್ಲಿ ರಚಿತವಾದ ನೂತನ ಸಿ ಆ್ಯಂಡ್ ಆರ್ ಪೂರ್ವಾನ್ವಯ ಮಾಡಿ 1ರಿಂದ 5 ತರಗತಿಗೆ ಸೀಮಿತಗೊಳಿಸಿ ಹಿಂಬಡ್ತಿ ನೀಡಿದ್ದು, ಇದು ಸಾಮಾಜಿಕ ನ್ಯಾಯಕ್ಕೆ ವ್ಯತಿರಿಕ್ತವಾಗಿದೆ ಎಂದು ಕಿಡಿಕಾರಿದರು.
ಇದರಿಂದ ಶಿಕ್ಷಕರಿಗೆ ಕಾಲಮಿತಿ ಬಡ್ತಿ, ಪ್ರೌಢ ಶಾಲಾ ಶಿಕ್ಷಕರ ಬಡ್ತಿ, ಮುಖ್ಯ ಶಿಕ್ಷಕರ ಬಡ್ತಿಗಳಲ್ಲಿ ಅನ್ಯಾಯವಾಗಿದ್ದು, ಜತೆಗೆ ವರ್ಗಾವಣೆಗಳಲ್ಲಿ ಕೂಡ ತೊಂದರೆಯಾಗಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.
ದೂರದ ಊರಿನ ಶಾಲೆಗಳಲ್ಲಿ 25-30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಶಿಕ್ಷಕರು ವರ್ಗಾವಣೆಗಾಗಿ ಕಾಯುತ್ತಿದ್ದಾರೆ. ಆದರೆ, ಪ್ರಸ್ತುತ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಪಿಎಸ್‌ಟಿ ಶಿಕ್ಷಕರಿಗೆ ವರ್ಗಾವಣೆಗಾಗಿ ಸ್ಥಳ ಸಿಗುತ್ತಿಲ್ಲ ಎಂದು ದೂರಿದರು.
ಪಿಎಸ್‌ಟಿ ಶಿಕ್ಷಕರು 6,7,8 ನೇ ತರಗತಿಗಳಿಗೆ ಪಾಠ ಮಾಡಬೇಕು. ಆದರೆ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ (ಜಿಪಿಟಿ)ಹುದ್ದೆಗಳಿಗೆ ಸ್ಥಳ ಆಯ್ಕೆ ಮಾಡಿಕೊಳ್ಳುವಂತಿಲ್ಲ. ಪಿಎಸ್‌ಟಿ ಶಿಕ್ಷಕರು ಪಿಎಸ್‌ಟಿ ಹುದ್ದೆಯ ಸ್ಥಳಕ್ಕೆ ಮಾತ್ರ ಅವಕಾಶವಿದೆ. ಪಿಎಸ್‌ಟಿ ಶಿಕ್ಷಕರು ಬೇರೆ ಶಾಲೆಗೆ ಸ್ಥಳ ಆಯ್ಕೆ ಮಾಡಿಕೊಂಡರೆ ಅವರ ಮೊದಲಿನ ಹುದ್ದೆ ಜಿಪಿಟಿ ಹುದ್ದೆಯಾಗಿ ಪರಿವರ್ತನೆಯಾಗಲಿದೆ. ಪಿಎಸ್‌ಟಿ ಹುದ್ದೆಗಳು ಖಾಲಿ ಇಲ್ಲವೇ ಇಲ್ಲ. ಇದ್ದರೂ ಅಲ್ಲೊಂದು ಇಲ್ಲೊಂದು ಮಾತ್ರ ಪಿಎಸ್‌ಟಿ ಹುದ್ದೆಗಳಿವೆ. ಇದರಿಂದ ಎಷ್ಟು ಶಿಕ್ಷಕರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಕಿಡಿಕಾರಿದರು.
ಜಿಪಿಟಿ ಶಿಕ್ಷಕರು ಕೆಲವೇ ವರ್ಷ ಸೇವೆ ಸಲ್ಲಿಸಿದ್ದರೆ ಸಾಕು ಮನೆಯಿಂದ ಕೂಗಳತೆ ದೂರದಲ್ಲಿ ನೂರಾರು ಶಾಲೆಗಳು ವರ್ಗಾವಣೆ ಅವಕಾಶ ದೊರೆಯುತ್ತಿದೆ. ಈ ರೀತಿಯ ವರ್ಗಾವಣೆ ಅವೈಜ್ಞಾನಿಕವಲ್ಲವೇ? ಆದ್ದರಿಂದ ಅರ್ಹ ಪಿಎಸ್‌ಟಿ ಶಿಕ್ಷಕರನ್ನು ಸೇವಾಜ್ಯೇಷ್ಠತೆಯೊಂದಿಗೆ ಜಿಪಿಟಿ ಶಿಕ್ಷಕರೆಂದು ಪದನಾಮೀಕರಣ ಮಾಡಿದರೆ, ಖಾಲಿ ಉಳಿದ ಎಲ್ಲ ಶಿಕ್ಷಕರ ಹುದ್ದೆಗಳ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಶಾಲಾ ಶಿಕ್ಷಣ ಗುಣಮಟ್ಟ ಇನ್ನಷ್ಟು ವೃದ್ಧಿಯಾಗಲಿದೆ. ಏಕಕಾಲದಲ್ಲೇ ಖಾಲಿ ಹುದ್ದೆಗಳಿಗೆ ವರ್ಗಾವಣೆ ಮಾಡಬಹುದು. ಇದರಿಂದ ಎಲ್ಲ ಶಿಕ್ಷಕರಿಗೂ ಅವಕಾಶ ಸಿಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಡಿಡಿಪಿಐ ಎಸ್.ಟಿ.ಜವರೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ವೇದಿಕೆ ರಾಜ್ಯ ಸಂಚಾಲಕ ಬಿ.ಎಸ್.ಮಂಜುನಾಥ್, ಉಮಾ ಗುಡ್ಡದ, ಶಂಕರ್ ಜೇನಿ, ನೇತ್ರಾವತಿ, ಗೀತಾ, ನಾಗರತ್ನ, ರಮೇಶ್, ಎಂ.ಲೋಕೇಶ್, ಮಹೇಶ್, ಪ್ರವೀಣ್, ಉಷಾ, ವಿ.ಪವಿತ್ರಾ, ಶೋಭಾ ಇನ್ನಿತರರಿದ್ದರು.