ನರಸಿಂಹ  
ಜಿಲ್ಲೆ

ದೇವರ ಆಭರಣ ಕದ್ದ ಅರ್ಚಕನ ಬಂಧನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಲಕ್ಷಾಂತರ ರೂ. ಮೌಲ್ಯದ ಆಭರಣಗಳನ್ನು ಅದೇ ದೇವಳದ ಅರ್ಚಕ ಕಳವುಗೈದಿದ್ದು, ಬಳಿಕ ದೇವರಿಗೆ ನಕಲಿ ಆಭರಣ ತೊಡಿಸಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶಿರಸಿ ತಾಲೂಕಿನ ಸಾಲಕಣಿ ಗ್ರಾಮದ ಮೂರೆಗಾರದ ನರಸಿಂಹ ಭಟ್ (43) ಬಂಧಿತ ಆರೋಪಿಯಾಗಿದ್ದು, ಈತ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಅಚರ್ಕನಾಗಿದ್ದ.

ದೇವಳದ ಆಡಳಿತ ಮಂಡಳಿ ಹಾಗೂ ಭಕ್ತರು ಜತೆಗೂಡಿ ಸೇವಾರೂಪದಲ್ಲಿ 21 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಸಮರ್ಪಿಸಿದ್ದರು. ಈ ಆಭರಣಗಳಿಂದ ನಿತ್ಯವೂ ದೇವರ ಅಲಂಕಾರ ನಡೆಸಲಾಗುತ್ತಿತ್ತು.

ಘಟನೆ ಬೆಳಕಿಗೆ ಬಂದದ್ದು

ದೇವಳದಲ್ಲಿ ನವರಾತ್ರಿಗೆ ಸಿದ್ಧತೆ ನಡೆಯುತ್ತಿದ್ದು, ಈ ಸಲುವಾಗಿ ಸೆ.21ರಂದು ಶುಚಿಗೊಳಿಸುವುದಕ್ಕಾಗಿ ದೇವರ ಆಭರಣಗಳನ್ನು ಅರ್ಚಕರಿಂದ ಪಡೆಯಲಾಯಿತು. ಈ ಸಂದರ್ಭ ಚಿನ್ನ ನಕಲಿ ಎಂಬುದು ಬೆಳಕಿಗೆ ಬಂದಿದ್ದು, ವಿಚಾರಣೆ ನಡೆಸಿದಾಗ ಆಭರಣಗಳನ್ನು ತೆಗೆದಿದ್ದಾಗಿ ಅರ್ಚಕನು ಒಪ್ಪಿಕೊಂಡಿದ್ದಾನೆ.

ಆಭರಣಗಳ ಕಳವುಗೈದ ಬಳಿಕ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಭಕ್ತರಿಗೆ ಸಂಶಯ ಬರಬಾರದೆಂಬ ಉದ್ದೇಶದಿಂದ ನಕಲಿ ಚಿನ್ನಾಭರಣಗಳನ್ನು ದೇವರ ಮೂರ್ತಿಯ ಮೇಲೆ ಹಾಕಿದ್ದನು. ಬಳಿಕ ಕದ್ದ ಆಭರಣಗಳನ್ನು ತನ್ನ ಸ್ವಂತ ಉಪಯೋಗಕ್ಕಾಗಿ ವಿವಿಧ ಬ್ಯಾಂಕುಗಳಲ್ಲಿ ಅಡವು ಇಟ್ಟಿದ್ದಾನೆ. ಗಂಗೊಳ್ಳಿ ಪಿಎಸ್‌ಐ ಹರೀಶ್ ಆರ್. ನೇತೃತ್ವದಲ್ಲಿ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ.