ತೈಲ ಬೆಲೆ ಏರಿಕೆ ಖಂಡಿಸಿ ಕೊಪ್ಪಳದಲ್ಲಿ ಶುಕ್ರವಾರ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ

ಕೊಪ್ಪಳ: ಇಂಧನ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯರು ಬದುಕು ನಡೆಸುವುದು ಕಷ್ಟವಾಗಿದೆ ಎಂದು ಆರೋಪಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ದೈನಂದಿನ ಅಗತ್ಯಗಳಾದ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸಾಮಾನ್ಯ ನಾಗರೀಕನ ಬದುಕು ಕಷ್ಟದತ್ತ ಸಾಗಿದೆ. ಆದರೂ ಕೇಂದ್ರ ಸರ್ಕಾರ ಸುಧಾರಣ ಕ್ರಮ ಕೈಗೊಳ್ಳುತ್ತಿಲ್ಲ. ತೈಲ ಬೆಲೆ ಏರಿಕೆಯಿಂದ ಆಟೋ, ಟ್ರಾೃಕ್ಟರ್‌ಗಳನ್ನು ನಡೆಸುವುದು ಕಷ್ಟವಾಗಿ ಮಾರಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಯುಪಿಎ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಹೆಚ್ಚಳದ ನಡುವೆಯೂ ತೈಲ ಬೆಲೆ ಏರಿಸಿರಲಿಲ್ಲ. ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಆದರೂ, ದಿನೇ ದಿನೆ ಪೆಟ್ರೋಲ್ ಬೆಲೆ ಏರಿಸಲಾಗುತ್ತಿದೆ. ಇದರಿಂದ ಎಲ್ಲ ವಸ್ತುಗಳ ಬೆಲೆ ನಿಧಾನವಾಗಿ ಏರುತ್ತಿದ್ದು, ಬಡವರು, ಮಧ್ಯಮ ವರ್ಗದವರು ಬದುಕು ಸಾಗಿಸುವುದು ಕಷ್ಟವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಬ್ರೇಕ್ ಹಾಕಬೇಕು. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಸರ್ಕಾರಕ್ಕೆ ಸೂಚನೆ ನೀಡಬೇಕು. ಎಲ್‌ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಮೊತ್ತವನ್ನು ಗ್ರಾಹಕರಿಗೆ ಮರಳಿಸಬೇಕು. ಅನಗತ್ಯ ಬೆಲೆ ಏರಿಕೆ ನಿಲ್ಲಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದೇಶಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ಪಕ್ಷದ ಕಾರ್ಯಾಧ್ಯಕ್ಷ ಹಸನುದ್ದೀನ್ ಆಲಂಬರ್ದಾರ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಲೀಮುದ್ದೀನ್, ಮುಖಂಡರಾದ ಮೌಲಾ ಹಣಗಿ, ನಾಸಿರ್ ಮಾಳೆಕೊಪ್ಪ, ಏಜಾಜ್ ಶೇಖ್ ಇತರರಿದ್ದರು.