ಜಿಲ್ಲೆ

ನೂರರ ಗಡಿ ಇಳಿಯದ ಟೊಮ್ಯಾಟೊ ದರ, ಸಗಟು-ಚಿಲ್ಲರೆ ವ್ಯಾಪಾರದಲ್ಲಿ ವ್ಯತ್ಯಾಸ

ಮರಿದೇವ ಹೂಗಾರ ಹುಬ್ಬಳ್ಳಿ

ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಿರುವ ‘ಕೆಂಪು ಸುಂದರಿ’ ಟೊಮ್ಯಾಟೊ ದರ ಇನ್ನೂ ಎರಡು ತಿಂಗಳು ಸ್ಥಿರತೆ ಕಾಯ್ದುಕೊಳ್ಳಲಿದೆ. ಮಳೆಯ ತೀವ್ರತೆಯ ಮೇಲೆ ಮಾರುಕಟ್ಟೆಗೆ ಟೊಮ್ಯಾಟೊ ಆಗಮನ-ನಿರ್ಗಮನ ಅವಲಂಬಿಸಿದೆ.

ಒಂದು ತಿಂಗಳಿಂದ ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರ 120 ರೂ.ಗೆ ಹೆಚ್ಚಿದೆ. ಆಗಾಗ ಇಳಿದಂತೆ ಕಂಡರೂ 100 ರೂ. ಗಡಿ ದಾಟುತ್ತಿದೆಯೇ ಹೊರತು, ಕೆಳಗೆ ಇಳಿಯುತ್ತಿಲ್ಲ. ಸಗಟು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ದರದ ಏರಿಳಿತದಿಂದ ಗ್ರಾಹಕರು ಕಂಗಾಲಾಗಿರುವುದಂತೂ ಸುಳ್ಳಲ್ಲ.

ಸದ್ಯ ರತ್ನಗಿರಿ, ಕೋಲಾರ, ಗೋಕಾಕ, ಘಟಪ್ರಭಾ, ಬೆಳಗಾವಿ ಜಿಲ್ಲೆಯಿಂದ ಹುಬ್ಬಳ್ಳಿ ಎಪಿಎಂಸಿಗೆ ಟೊಮ್ಯಾಟೊ ಆಗಮಿಸುತ್ತಿದೆ. ನಿತ್ಯ 12 ಚಕ್ರದ 6 ಲಾರಿಗಳಲ್ಲಿ ಟೊಮ್ಯಾಟೊ ಆಗಮಿಸುತ್ತಿದ್ದಂತೆ ಮಧ್ಯಾಹ್ನದೊತ್ತಿಗೆ ಖಾಲಿಯಾಗುತ್ತಿದೆ. ಈ ಮೊದಲು ಸುತ್ತಲಿನ ಪ್ರದೇಶದ ಗ್ರಾಮೀಣ ಭಾಗದಲ್ಲಿ ಟೊಮ್ಯಾಟೊ ಬೆಳೆಗಾರರು ಮಾರುಕಟ್ಟೆಗೆ ಬರುತ್ತಿದ್ದರು. ಈಗ ಈ ಭಾಗದಲ್ಲಿ ಮಳೆ ಬಂದು ಬೆಳೆದಿದ್ದ ಬೆಳೆ ಗಿಡ ಸಮೇತ ಹಾಳಾಗಿದೆ. ಹಾಗಾಗಿ ಬೇರೆ ರಾಜ್ಯ ಹಾಗೂ ಜಿಲ್ಲೆಗಳ ಟೊಮ್ಯಾಟೊ ಮೇಲೆ ಹುಬ್ಬಳ್ಳಿಗರು ಅವಲಂಬನೆಯಾಗಿದ್ದಾರೆ.

ಸದ್ಯ ಮಳೆ ನಿಂತಿದೆ. ಆದರೆ, ಇದೇ ರೀತಿಯ ವಾತಾವರಣ ಇದ್ದರೂ ಇನ್ನೆರಡು ತಿಂಗಳಿಗೆ ಹೊಸ ಟೊಮ್ಯಾಟೊ ಬೆಳೆ ಬರಲಿದೆ. ಒಂದು ವೇಳೆ ಮಳೆಯ ತೀವ್ರತೆ ಹೆಚ್ಚಿದರೆ ಸಮಯಾವಕಾಶ ನಿಗದಿ ಮಾಡುವುದು ಸಲೀಸಲ್ಲ. ದರ ಹೀಗೆಯೇ ಸ್ಥಿರತೆ ಕಾಯ್ದುಕೊಳ್ಳಬಹುದು. ಮಳೆಯ ಮೇಲೆ ಮುಂದಿನ ದಿನಗಳಲ್ಲಿ ಟೊಮ್ಯಾಟೊ ದರ ನಿಗದಿಯಾಗಲಿದೆ ಎನ್ನುತ್ತಾರೆ ಕಲಘಟಗಿ ತಾಲೂಕು ಬಿ. ಗುಡಿಹಾಳ ಗ್ರಾಮದ ರೈತ ಲಕ್ಷ್ಮಣ ದಾನ್ವೇನವರ.

ಡೊಕೊಮೊ ಮೇಲಾಟ

ಗುಣಮಟ್ಟದ ಟೊಮ್ಯಾಟೊ ದರ 120 ರೂ. ಮೇಲಿರುವುದರಿಂದ ಗ್ರಾಹಕರು, ಡೊಕೊಮೊ (ಕಳೆ ದರ್ಜೆ) ಟೊಮ್ಯಾಟೊವನ್ನು ಖರೀದಿ ಮಾಡುತ್ತಿದ್ದಾರೆ. ಇದರ ಬೆಲೆ ಅಂದಾಜು 60 ರೂ. ಅರ್ಧಕ್ಕರ್ಧ ಬೆಲೆ ಇರುವುದರಿಂದ ಇದೇ ಟೊಮ್ಯಾಟೊ ಕೊಂಡೊಯ್ಯುತ್ತಿದ್ದಾರೆ.

ಸೊಪ್ಪು, ತರಕಾರಿ ಬೆಲೆ ಇಳಿಕೆ

ಮಾರುಕಟ್ಟೆಗೆ ಸೊಪ್ಪು ಯಥೇಚ್ಛವಾಗಿ ಬರುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ. ಸಗಟು ರೂಪದಲ್ಲಿ (ಒಂದು ಸಿವುಡು) ಕೊತ್ತಂಬರಿ 2 ರೂ., ಮೆಂತೆ 10 ರೂ.,. ಪಾಲಕ್ 5 ರೂ., ಕಿರ್ಕಸಾಲಿ 8 ರೂ., ರಾಜಗಿರಿ 4 ರೂ., ಮೂಲಂಗಿ (ಒಂದಕ್ಕೆ) 1 ರೂ. ಇದೆ. ಟೊಮ್ಯಾಟೊ ಬಿಟ್ಟು ಇತರ ತರಕಾರಿಗಳ ಬೆಲೆಯೂ ಇಳಿಮುಖವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಗಟಿಗಿಂತ ಒಂದೆರಡು ರೂಪಾಯಿ ಹೆಚ್ಚಿಗೆ ದರ ಇರಬಹುದು ಎನ್ನುತ್ತಾರೆ ಸಗಟು ವ್ಯಾಪಾರಿಗಳು.

ಒಂದು ತಿಂಗಳಿಂದ ಟೊಮ್ಯಾಟೊ ಬೆಲೆಯಲ್ಲಿ ಇಳಿಕೆಯಾಗಿಲ್ಲ. ಇನ್ನೆರಡು ತಿಂಗಳು ಇದು ಮುಂದುವರಿಯಬಹುದು. ಗುಣಮಟ್ಟದ ಟೊಮ್ಯಾಟೊಗಿಂತ ಡೊಕೊಮೊ ಟೊಮ್ಯಾಟೊ ಹೆಚ್ಚಾಗಿ ಗ್ರಾಹಕರು ಖರೀದಿಸುತ್ತಿದ್ದಾರೆ. ಆಗಿಂದಾಗಲೇ ಟೊಮ್ಯಾಟೊ ಸಗಟು ವ್ಯಾಪಾರ-ವಹಿವಾಟು ನಡೆದು ಮಾರುಕಟ್ಟೆಗೆ ಶಾಂತವಾಗಿಬಿಡುತ್ತಿದೆ. ವಿಶ್ವನಾಥ ಬೂದೂರ, ಹುಬ್ಬಳ್ಳಿ ಎಪಿಎಂಸಿಯ ಸಗಟು ವ್ಯಾಪಾರಿ ಮನೆಯಲ್ಲಿ ಟೊಮ್ಯಾಟೊ ಸಾರು, ಪಲ್ಯೆ ಮಾಡದಂತಾಗಿದೆ. ಬೆಲೆ ಕಂಡು ದಂಗಾಗಿದ್ದೇವೆ. ಏನಾದರೂ ತರಕಾರಿ ತೆಗೆದುಕೊಂಡು ಹೋಗುತ್ತಿದ್ದೇವೆಯೇ ಹೊರತು ಟೊಮ್ಯಾಟೊ ಕೊಳ್ಳುತ್ತಿಲ್ಲ. ತರಕಾರಿಗಾಗಿಯೇ ತುಂಬಿದ ಜೇಬು ಖಾಲಿ ಆಗಿಬಿಡುತ್ತಿದೆ. ಯಲ್ಲಪ್ಪ ಮರದಣ್ಣವರ, ಭೈರಿದೇವರಕೊಪ್ಪ
  • ಕೆಜಿ ಲೆಕ್ಕದ ತರಕಾರಿ ಬೆಲೆ (ರೂಪಾಯಿ)
  • ಟೊಮ್ಯಾಟೊ -120-150
  • ಮೆಣಸಿನಕಾಯಿ- 60-80
  • ಡೊಣಗಾಯಿ -70
  • ಬದನೆಕಾಯಿ -70
  • ಬೆಂಡಿಕಾಯಿ -80
  • ಹೀರೇಕಾಯಿ -50
  • ಸೌತೆಕಾಯಿ -40
  • ಚವಳಿಕಾಯಿ -50-70
  • ಅವರೆಕಾಯಿ -50-60
  • ಗಜ್ಜರಿ -50
  • ಬೀನ್ಸ್ -80
  • ನುಗ್ಗೆ -200
  • ಉಳ್ಳಾಗಡ್ಡಿ -25