ಜಿಲ್ಲೆ

ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗೂಡಿನ ಬೆಲೆ ಏರಿಕೆ

ಚಿಕ್ಕಬಳ್ಳಾಪುರ:ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶುಕ್ರವಾರ ಗೂಡಿನ ಬೆಲೆ ಏರಿಕೆ ಕಂಡಿದೆ. ರೇಷ್ಮೆ ಬೆಳೆಗಾರರೊಬ್ಬರು ತಂದಿದ್ದ ದ್ವಿತಳಿ (ಬೈವೋಲ್ಟಿನ್) ರೇಷ್ಮೆಗೂಡು ಕೆಜಿಗೆ 800 ರೂ.ಗಳಿಗೆ ಮಾರಾಟವಾಗಿರುವುದು ಈ ವರ್ಷದ ಅತ್ಯಧಿಕ ಬೆಲೆ ಎಂದು ದಾಖಲೆಯಾಗಿದೆ.

ದೇವನಹಳ್ಳಿ ತಾಲೂಕು ಹೊಸೂರು ಗ್ರಾಮದ ರೇಷ್ಮೆ ಬೆಳೆಗಾರ ಕೆ. ಕೃಷ್ಣಮೂರ್ತಿ ಅವರು ಬೆಳೆದು ತಂದಿದ್ದ ದ್ವಿತಳಿ ರೇಷ್ಮೆಗೂಡು 800 ರೂ.ಗಳಿಗೆ ಮಾರಾಟವಾಯಿತು. ರೀಲರ್ ಸಲೀಂ ಹೆಚ್ಚು ದರ ನೀಡಿ ಖರೀದಿ ಮಾಡಿದ್ದಾರೆ. ಉತ್ತಮ ಬೆಲೆಗೆ ಗೂಡು ಖರೀದಿಸಿದ ರೀಲರ್ ಸಲೀಂ ಮತ್ತು ಉತ್ತಮ ಬೆಳೆ ತಂದಿದ್ದ ರೈತ ಕೃಷ್ಣಮೂರ್ತಿ ಇಬ್ಬರಿಗೂ ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ಎನ್.ಮಹದೇವಯ್ಯ ಮತ್ತು ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ಪ್ರಮಾಣಪತ್ರ ನೀಡಿದರು.

*ದ್ವಿತಳಿ ಬೆಳೆಯಲು ಪ್ರೋತ್ಸಾಹಧನ

ರೇಷ್ಮೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ಮಾತನಾಡಿ, ದ್ವಿತಳಿ ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಲು ಇಲಾಖೆಯಿಂದ ಪ್ರತಿ ಕೆ.ಜಿ. ದ್ವಿತಳಿ ರೇಷ್ಮೆಗೂಡಿಗೆ 30 ರೂ. ಮತ್ತು ಪ್ರತಿ 100 ಮೊಟ್ಟೆ ದ್ವಿತಳಿ ಚಾಕಿಗೆ 1000 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ದ್ವಿತಳಿ ರೇಷ್ಮೆಗೂಡು 800 ರೂ. ಗಡಿ ದಾಟಿರುವುದರಿಂದ ರೇಷ್ಮೆಹುಳುವಿನ ಸಾಕಣೆಗೆ ಬೆಳೆಗಾರರು ಉತ್ಸುಕರಾಗಿದ್ದಾರೆ ಎಂದರು.