ಧನಂಜಯ ಎಸ್.ಹಕಾರಿ ದಾವಣಗೆರೆ: ದಿನೇದಿನೆ ಏರಿಕೆಯಾಗುತ್ತಿರುವ ಬಿಸಿಲಿನ ತಾಪ ಹಾಗೂ ಮಳೆ ಕೊರತೆಯಿಂದ ತರಕಾರಿಗಳ ಬೆಲೆ ಗಗನಕ್ಕೇರುತ್ತಿದ್ದು, ಗ್ರಾಹಕರು ಚಿಂತೆಗೀಡಾಗಿದ್ದಾರೆ.
ಅಕಾಲಿಕ ಮಳೆ ಕಾರಣ ಬೆಳೆ ಕುಂಠಿತಗೊಂಡು ಕೃಷಿ ಉತ್ಪನ್ನಗಳ ಇಳುವರಿ ಮೇಲೆ ತೀವ್ರ ಪರಿಣಾಮ ಬೀರಿದೆ. ಗ್ರಾಹಕರ ಜೇಬಿಗೂ ಕತ್ತರಿ ಬೀಳುತ್ತಿದೆ.
ಉತ್ತಮ ಬೆಲೆ ನಿರೀಕ್ಷೆಯೊಂದಿಗೆ ಅಲ್ಪ-ಸ್ವಲ್ಪ ನೀರಿನಲ್ಲೇ ರೈತರು ಬೇಸಾಯ ಮಾಡಿದರೆ ಕೀಟಗಳ ಕಾಟ, ಬೆಳೆಯ ಗುಣಮಟ್ಟ ಕುಸಿತ.
ಇವೆಲ್ಲ ಕಾರಣಗಳಿಂದ ರೈತಾಪಿ ವರ್ಗ ತರಕಾರಿ ಬೆಳೆಯಲು ಹಿಂದೇಟು ಹಾಕುತ್ತಿದೆ. ಇದರ ನೇರ ಪರಿಣಾಮ ಉತ್ಪಾದನೆ ಹಾಗೂ ಗ್ರಾಹಕನ ಮೇಲೆ ಬೀರುತ್ತಿದೆ.
ಮದುವೆ ಸೀಸನ್ ಕಾರಣ ವ್ಯಾಪಾರಿಗಳು ಹೇಳಿದ ಬೆಲೆಗೆ ಗ್ರಾಹಕರು ತರಕಾರಿ ಖರೀದಿಸುವಂತಾಗಿದೆ. ಮದುವೆ ಸೀಸನ್ ಬಂಡವಾಳ ಮಾಡಿಕೊಂಡು ವ್ಯಾಪಾರಿಗಳು ಒಂದಷ್ಟು ಲಾಭ ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರೆ. ಒಟ್ಟಿನಲ್ಲಿ ತರಕಾರಿ ಬೆಲೆ ಗ್ರಾಹಕನಿಗೆ ನುಂಗಲಾರದ ತುಪ್ಪವಾಗಿರುವುದಂತೂ ಸತ್ಯ.
ತರಕಾರಿ ಬೆಲೆ
ಬೀನ್ಸ್ - 200, ಹಸಿಮೆಣಸಿನಕಾಯಿ -120, ಟೋಮ್ಯಾಟೋ - 60, ಹಿರೇಕಾಯಿ - 50, ಕ್ಯಾಪ್ಸಿಕಂ - 60, ದೊಡ್ಡ ಮೆಣಸಿನಕಾಯಿ - 85, ಕ್ಯಾರೆಟ್ - 50, ಹಾಗಲಕಾಯಿ - 50, ತೊಂಡೆಕಾಯಿ -40, ಸೋರೆಕಾಯಿ - 45, ಬದನೆಕಾಯಿ - 45, ಮುಳಗಾಯಿ - 40, ಜವಳಿಕಾಯಿ - 40, ಮೂಲಂಗಿ - 40, ನಿಂಬೆಹಣ್ಣು 3ಕ್ಕೆ - 20
ಕಾಲಕಾಲಕ್ಕೆ ಮಳೆ ಆಗದ ಹಿನ್ನೆಲೆಯಲ್ಲಿ ತರಕಾರಿ ಬೆಲೆ ದುಬಾರಿಯಾಗಿದೆ. ಸ್ಥಳೀಯ ರೈತರ ಉತ್ಪನ್ನಗಳು ಮಾರುಕಟ್ಟೆಗೆ ಬಾರದೆ ಹೊರ ಜಿಲ್ಲೆ, ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿರುವುದು ತರಕಾರಿಗಳ ಬೆಲೆ ಹೆಚ್ಚಳವಾಗಿದೆ.ಅಜಯ್, ತರಕಾರಿ ವ್ಯಾಪಾರಿ
ರಾಜ್ಯದಲ್ಲಿ ಮಳೆ ಅಭಾವದಿಂದ ರೈತರಿಗೆ ನಿರೀಕ್ಷಿತ ಬೆಳೆ ಕೈಗೆ ಸಿಗುತ್ತಿಲ್ಲ. ಹೀಗಾಗಿ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ದಾವಣಗೆರೆ ಮಾರುಕಟ್ಟೆಗೆ ಬೇರೆ ಜಿಲ್ಲೆಗಳಿಂದ ತರಕಾರಿ ಆಮದು ಮಾಡಿಕೊಳ್ಳಲಾಗುತ್ತಿದೆ.ಕೆ.ಜಿ.ಎಂ. ಅಜಯ್, ತರಕಾರಿ ವ್ಯಾಪಾರಿ
ಸಾಮಾನ್ಯವಾಗಿ ತರಕಾರಿ ಖರೀದಿಗೆ ಮಾರುಕಟ್ಟೆಗೆ ಬರುತ್ತೇವೆ. ಆದರೆ, ದಿನ ದಿನಕ್ಕೂ ಬೆಲೆ ಏರಿಕೆಯಾಗುತ್ತಿರುವುದರಿಂದ ತರಕಾರಿ ಕೊಳ್ಳದಿರುವುದೇ ಉತ್ತಮ ಎನಿಸುತ್ತಿದೆ. ದುಬಾರಿ ವೆಚ್ಚದ ಜೀವನ ನಡೆಸುವುದು ಕಷ್ಟವಾಗಿದೆ.ಸುಧಾ, ಗ್ರಾಹಕಿ ಮಳೆ ಬಾರದೆ ಹಳ್ಳಿ ಜನರ ಬದುಕು ಮೂರಾಬಟ್ಟೆಯಾಗಿದೆ. ವಾರದ ಸಂತೆಗೆ ದಾವಣಗೆರೆಗೆ ಬರ್ತೀವಿ. ತರಕಾರಿ ಬೆಲೆ ಕೇಳಿದರೆ ಖರೀದಿಸುವುದು ಹೇಗೆ. ಇಷ್ಟೊಂದು ಬೆಲೆ ಕೊಟ್ಟು ತರಕಾರಿ ತಿನ್ನುವುದಕ್ಕಿಂತ ಪರ‌್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.ರುದ್ರಮ್ಮ, ರೈತ ಮಹಿಳೆ
ತರಕಾರಿ ಬೆಲೆ ಹೆಚ್ಚಾಗಿರುವ ಕಾರಣ ಖರೀದಿಸುವ ಗೋಜಿಗೆ ಹೋಗುತ್ತಿಲ್ಲ. ದಿನವೂ ಬೇಳೆ ಕಾಳುಗಳ ಸಾಂಬಾರ್ ಮಾಡುತ್ತಿದ್ದೇವೆ. 200 ರೂ. ಕೊಟ್ಟು ಬೀನ್ಸ್ ತಿನ್ನುವ ಅಗತ್ಯತೆ ಇಲ್ಲ.ರೇಖಾ, ಗ್ರಾಹಕಿ