ಭದ್ರಾವತಿ: ಪ್ರೌಢಶಾಲಾ ಮುಖ್ಯಶಿಕ್ಷಕರನ್ನು ಬೇರೆಡೆಗೆ ನಿಯೋಜನೆ ಮಾಡಿರುವುದನ್ನು ಖಂಡಿಸಿ ಬುಧವಾರ ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದರು.
ಕಳೆದ 15 ವರ್ಷಗಳಿಂದಲೂ ಈ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋತಿನಾಯ್ಕ ಅವರು ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲಾ ಕಟ್ಟಡ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕೇವಲ 100 ಮಕ್ಕಳಿದ್ದ ಶಾಲೆಯನ್ನು ಇಂದು 600 ಮಕ್ಕಳ ಶಾಲೆಯನ್ನಾಗಿ ಪರಿವರ್ತಿಸಿದ್ದಾರೆ. ಶೇ.40 ಲಿತಾಂಶ ಪಡೆಯುತ್ತಿದ್ದ ಶಾಲೆಯನ್ನು ಇಂದು ಶೇ.95ಕ್ಕೆ ಏರಿಕೆಯಾಗುವಂತೆ ಮಾಡಿದ್ದಾರೆ. ಅಂತಹ ಶಿಕ್ಷಕರನ್ನು ಬೇರೆಡೆ ವರ್ಗಾವಣೆ ಮಾಡುವುದು ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದರು.
ಯಾವುದೆ ತಪ್ಪುಗಳನ್ನು ಮಾಡದ ಶಿಕ್ಷಕರ ಮೇಲೆ ಕೆಲವರು ವೈಯಕ್ತಿಕ ದ್ವೇಷದಿಂದ ಇಲ್ಲಸಲ್ಲದ ಅಪಾದನೆಗಳನ್ನು ಮಾಡಿ ಬೇರೆ ತಾಲೂಕಿನ ಶಾಲೆಗೆ ನಿಯೋಜನೆ ಆಗುವಂತೆ ಮಾಡಿದ್ದಾರೆ. ಶಾಲೆಗಳು ಆರಂಭವಾದ ಸಂದರ್ಭದಲ್ಲಿ ಬೇರೆಡೆ ನಿಯೋಜನೆ ಮಾಡುವುದು ಎಷ್ಟು ಸರಿ? ಅವರ ನಿಯೋಜನೆಯನ್ನು ಈ ಕೂಡಲೆ ರದ್ದುಗೊಳಿಸಬೇಕು ಹಾಗೂ ಅವರು ಅರಳಿಹಳ್ಳಿ ಸರ್ಕಾರಿ ಶಾಲೆಯಲ್ಲಿಯೆ ಮುಂದುವರಿಯಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆ ಸುದ್ದಿ ತಿಳಿದಿದ್ದ ಪೊಲೀಸರು ಬೆಳಗ್ಗಿನಿಂದಲೆ ಶಾಲಾ ಗೇಟ್ ಮುಂಭಾಗ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಪ್ರತಿಭಟನಾಕಾರರು ಶಾಲಾ ಆವರಣದೊಳಗೆ ನುಗ್ಗಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಪೊಲೀಸರ ಬಿಗಿ ಕ್ರಮದಿಂದ ಬೇಸತ್ತ ಗ್ರಾಮಸ್ಥರು ಮುಖ್ಯ ರಸ್ತೆಗೆ ಆಗಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಇದರಿಂದಾಗಿ ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಮಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.
ನಂತರ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಮಾತನಾಡಿ, ಶಿಕ್ಷಕರ ಬೇರೆಡೆ ನಿಯೋಜನೆ ಸರ್ಕಾರದ ಆದೇಶವಾಗಿದ್ದು ಶಾಂತಿ ಸಂಯಮ ಕಾಯ್ದುಕೊಳ್ಳುವಂತೆ ಹಾಗೂ ಪ್ರತಿಭಟನೆ ಹಿಂಪಡೆಯುವಂತೆ ಪ್ರತಿಭಟನಾಕಾರರ ಮನವೊಲಿಸುತ್ತಿದ್ದ ದೃಶ್ಯ ಕಂಡು ಬಂದಿತು. ಮುಖ್ಯಶಿಕ್ಷಕ ಮೋತಿ ನಾಯ್ಕ ಅವರು ಈ ಶಾಲೆಗೆ ಹಿಂದಿರುಗಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ನಮ್ಮ ಮಕ್ಕಳನ್ನು ಶಾಲಾ ಕೊಠಡಿಯಿಂದ ಹೊರಗೆ ಕಳುಹಿಸಿ ಎಂದು ಪಾಲಕರು ಪಟ್ಟು ಹಿಡಿದರು.
ಗಣಪತಿ ಭಟ್, ಪಾರ್ಥಿಬನ್, ರಮೇಶ್, ರುದ್ರೇಶ್, ಸೋಮಶೇಖರ್, ಪುಟ್ಟಪ್ಪ, ಅನಿತಾ, ಲಲಿತಮ್ಮ, ಆಶಾ, ನೀಲಮ್ಮ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.