ಮೈಸೂರು: ಹಿಂದಿನ ಸರ್ಕಾರ ರಂಗಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಿಲ್ಲ. ಜತೆಗೆ, ಇವುಗಳಿಗೆ ವೇದಿಕೆಯಾದ ಸರ್ಕಾರಿ ರಂಗಮಂದಿರದ ಬಾಡಿಗೆಯನ್ನೂ ಹೆಚ್ಚಿಸಿತು ಎಂದು ಕನ್ನಡ ಮತ್ತು ಸಂಸ್ಕೃತಿ ಮಾಜಿ ಸಚಿವೆ, ಎಂಎಲ್‌ಸಿ ಉಮಾಶ್ರೀ ಅಸಮಾಧಾನ ವ್ಯಕ್ತಪಡಿಸಿದರು.
ನಿರಂತರ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ನಿರಂತರ ರಂಗ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಸಚಿವೆಯಾಗಿದ್ದಾಗ ಮತ್ತು ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಂಗಭೂಮಿಗೆ ಹೆಚ್ಚಿನ ಅನುದಾನ ನೀಡಿ ಉತ್ತೇಜನ ನೀಡಲಾಗಿತ್ತು. ಸರ್ಕಾರಿ ರಂಗಮಂದಿರಗಳ ಬಾಡಿಗೆಯನ್ನೂ ಇಳಿಕೆ ಮಾಡಿ 2500ರಿಂದ 3500 ರೂ. ಒಳಗೆ ನಿಗದಿ ಮಾಡಲಾಗಿತ್ತು.
ನಂತರ ಬಂದ ಸರ್ಕಾರ ಇದನ್ನು ಮುಂದುವರಿಸಲಿಲ್ಲ. ಬದಲಿಗೆ ಅನುದಾನ ಕೊಡುವುದನ್ನು ನಿಲ್ಲಿಸಿತು. ಜತೆಗೆ, ರಂಗಮಂದಿರದ ಬಾಡಿಗೆಯನ್ನೂ ಹೆಚ್ಚಿಸಿತು ಎಂದು ಕಳವಳ ವ್ಯಕ್ತಪಡಿಸಿದರು.
ರಂಗಮಂದಿರವನ್ನು ವ್ಯಾಪಾರಕ್ಕಾಗಿ ನಿರ್ಮಿಸಿಲ್ಲ. ಇದು ರಂಗಚಟುವಟಿಕೆಗಳು ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳು, ಕನ್ನಡದ ಕೆಲಸಕ್ಕೆ ಮೀಸಲು. ದುಬಾರಿ ಬಾಡಿಗೆಯನ್ನು ಕಟ್ಟಿಕೊಂಡು ಇದನ್ನು ನಡೆಸಲು ಆಗಲ್ಲ ಎಂದರು.
ಈ ವಿಷಯ ಚಳಿಗಾಲದ ಅಧಿವೇಶನ ಮುಗಿದ ಬಳಿಕ ಗೊತ್ತಾಗಿದೆ. ಇದನ್ನು ಸರಿಪಡಿಸುವ ಕೆಲಸ ಆಗಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಈ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ರಂಗಸಂಸ್ಥೆಗಳನ್ನು ಗಟ್ಟಿಗೊಳಿಸಿ, ರಂಗಕ್ರಿಯೆ, ರಂಗ ಚಳವಳಿಯನ್ನು ಬಲಪಡಿಸುವ ಕೆಲಸವನ್ನು ಈಗಿನ ಸರ್ಕಾರದ ಅವಧಿಯಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಂಗಭೂಮಿ ಭವಿಷ್ಯ ಈಗಿನ ಯುವಪೀಳಿಗೆ. ಅದಕ್ಕಾಗಿ ಹೊಸ ತಲೆಮಾರನ್ನು ನಾಟಕರಂಗಕ್ಕೆ ಸಜ್ಜುಗೊಳಿಸುವ ಕೆಲಸವೂ ಆಗಬೇಕು. ರಂಗಚಟುವಟಿಕೆ ನಿರಂತರ, ಸಕ್ರಿಯವಾಗಿ ಮುಂದುವರಿಯಬೇಕು. ಜತೆಗೆ, ಕ್ರಿಯಾತ್ಮಕ ಮತ್ತು ರಚನಾತ್ಮಕವಾಗಿ ಇರಬೇಕು. ಅದಕ್ಕಾಗಿ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ರಂಗಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಲು ಅವಕಾಶ ಕಲ್ಪಿಸಿ ಅವರನ್ನು ಸಂಘಜೀವಿಯಾಗಿ ರೂಪಿಸಬೇಕು. ಅಭಿವ್ಯಕ್ತಿ ಭಯವಿಲ್ಲದೆ ಮುಕ್ತವಾಗಿ ಬೆಳೆಸಲು ಪಾಲಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಾನಪದ ವಿದ್ವಾಂಸ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಸರ್ಕಾರದ ಹಂತದಲ್ಲಿ ರಂಗಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವುದು ಸ್ಥಗಿತಗೊಂಡಿದೆ. ಈ ಸಮಸ್ಯೆಯನ್ನು ಉಮಾಶ್ರೀ ಅವರು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ನಿರಂತರ ಸಂಸ್ಥೆಯ ಶ್ರೀನಿವಾಸು ಪಾಲಹಳ್ಳಿ ಇದ್ದರು.
ಇದಕ್ಕೂ ಮುನ್ನ ನಡೆದ ವಾದ್ಯಗಳ ಜುಗಲ್ ಬಂದಿ ಸಭಿಕರನ್ನು ರಂಜಿಸಿತು. ಶ್ರೀಕಂಠಸ್ವಾಮಿ (ಡ್ರಮ್ಮರ್), ಮುನ್ನಾ (ಗಿಟಾರ್), ಅನುಷ್ ಶೆಟ್ಟಿ (ತಬಲ) ಹಾಗೂ ಕೃಷ್ಣಚೈತನ್ಯ (ಚಂಡೆ) ಪ್ರಸ್ತುತಪಡಿಸಿದ ರಿದಂ ವಾದ್ಯ ನೆರೆದವರ ಮನಗೆದ್ದಿತು. ಬಳಿಕ ಮಹಾದೇವ ಹಡಪದ ನಿರ್ದೇಶನದಲ್ಲಿ ಧಾರವಾಡದ ಆಟಮಾಟ ತಂಡದ ಕಲಾವಿದರು ‘ನಾ ರಾಜಗುರು’ ನಾಟಕವನ್ನು ಪ್ರಸ್ತುತಪಡಿಸಿದರು.