ಜಿಲ್ಲೆ

ಮುಂಜಾಗ್ರಾತೆಯೊಂದೇ ಕೋವಿಡ್‌ಗೆ ಮದ್ದು

ಮರಿದೇವ ಹೂಗಾರ

ಹುಬ್ಬಳ್ಳಿ: ರಾಜ್ಯ ಸರ್ಕಾರ ನಿಗದಿಪಡಿಸಿದ ಕೋವಿಡ್ ಮಾರ್ಗದರ್ಶನವನ್ನು ಎಲ್ಲರೂ ಪಾಲಿಸಬೇಕು. ಇದುವರೆಗೂ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಕಂಡುಬಂದಿಲ್ಲ. ಮುಂಜಾಗ್ರತಾ ಕ್ರಮ ಕೈಗೊಳ್ಳುವುದರಿಂದ ಕೋವಿಡ್ ಸ್ವಯಂ ನಿಯಂತ್ರಣ ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ನಗರದ ಕೆಎಂಸಿಆರ್‌ಐಗೆ ಬುಧವಾರ ಭೇಟಿ ನೀಡಿದ ಸಚಿವರು, ವೈದ್ಯರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಜ್ವರ, ಕೆಮ್ಮು, ನೆಗಡಿ (ಸಾರಿ) ಬಂದವರಿಗೆ ಕೋವಿಡ್ ಪರೀಕ್ಷೆ ಮಾಡಲಾಗುವುದು. ಆರ್‌ಟಿಪಿಸಿಆರ್ ಪರೀಕ್ಷಾ ಕಿಟ್ ಇನ್ನೂ ಬಂದಿಲ್ಲ. ವಾರದೊಳಗೆ ಬಂದು ತಲುಪಲಿವೆ. ನಂತರ ಪರೀಕ್ಷೆ ನಡೆಯಲಿದೆ. ಕೋವಿಡ್ ಪಾಸಿಟಿವ್ ಬಂದವರಿಗಾಗಿ ಕೆಎಂಸಿಆರ್‌ಐನಲ್ಲಿ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. 40 ಕೆಎಲ್(ಕಿಲೋ ಲೀಟರ್) ಆಕ್ಸಿಜನ್ ಟ್ಯಾಂಕ್ ಇದೆ. ಐಸಿಯು, ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಧಾರವಾಡ ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಕಿಟ್‌ಗಳಿವೆ. ವೈದ್ಯರು ಕೂಡ ಇದ್ದಾರೆ. ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಇದಕ್ಕೂ ಮೊದಲು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಹೇಮಲತಾ ಹಾಗೂ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ವಿನೋದ ರಟಗೇರಿ ಅವರಿಂದ ತಾಯಿ ಮತ್ತು ಮಗು ಆರೋಗ್ಯ, ಜನನ ಮತ್ತು ಮರಣ ಪ್ರಮಾಣದ ಮಾಹಿತಿ ಪಡೆದರು.

ಹೆಸ್ಕಾಂ ಅಧ್ಯಕ್ಷ ಅಜೀಂಪೀರ್ ಖಾದ್ರಿ, ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ರಾಜಾಶಂಕರ ಎಸ್., ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಡಾ. ಮಹೇಶ ಕುಮಾರ ಇತರರು ಉಪಸ್ಥಿತರಿದ್ದರು.

ಆರ್‌ಎಂಒ ಡಾ. ರಾಜಶೇಖರ ದ್ಯಾಬೇರಿ ಹಾಗೂ ಡಾ. ಲಕ್ಷ್ಮೀಕಾಂತ ಲೋಕರೆ ಅವರು ಕೋವಿಡ್ ಸಿದ್ಧತೆ ಬಗ್ಗೆ ಪ್ರಾಜೆಕ್ಟ್ ಮೂಲಕ ವಿವರಿಸಿದರು.