ಕಲಘಟಗಿ ತಾಲೂಕಿನ ತಂಬೂರ ಗ್ರಾ.ಪಂ.ನಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶ ರವೀಂದ್ರ ಎಲ್. ಹೊನೋಲೆ ಉದ್ಘಾಟಿಸಿದರು. ದಿವಾಣಿ ನ್ಯಾಯಾಧೀಶ ಗಣೇಶ ಎನ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಗ್ರಾ.ಪಂ. ಅಧ್ಯಕ್ಷೆ ಗೌಸಿಯಾಬಾನು ಗೌಸಲಿ ಮುಲ್ಲಾ ಇದ್ದರು. 
ಜಿಲ್ಲೆ

ಮಾನವ ಕಳ್ಳಸಾಗಣೆ ತಡೆ ಎಲ್ಲರ ಹೊಣೆ

ಸೋಮನಾಥ ರೆಡ್ಡಿ

ಕಲಘಟಗಿ: ವಿವಿಧ ರೀತಿಯ ಆಮಿಷಗಳನ್ನೊಡ್ಡಿ ಮಕ್ಕಳು ಹಾಗೂ ಮಹಿಳೆಯರ ಕಳ್ಳ ಸಾಗಾಣಿಕೆ ಮಾಡಿ ದುಷ್ಕೃತ್ಯ ಎಸಗುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ತೊಡಗಿಕೊಳ್ಳಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವೀಂದ್ರ ಎಲ್. ಹೊನೋಲೆ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ, ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ, ತಂಬೂರು ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳ ಸಾಗಣಿಕೆ ತಡೆ ದಿನಾಚರಣೆ ಅಂಗವಾಗಿ ತಾಲೂಕಿನ ತಂಬೂರ ಗ್ರಾ.ಪಂ. ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನದಿಂದ ಬಳಲುತ್ತಿರುವವರನ್ನು ಕೇಂದ್ರೀಕರಿಸಿ ಅವರಿಗೆ ಹಣದ ಆಮಿಷವೊಡ್ಡಿ ಮಕ್ಕಳನ್ನು ಹಾಗೂ ಮಹಿಳೆಯರನ್ನು ಕಳ್ಳ ಮಾರ್ಗದ ಮೂಲಕ ಸಾಗಾಟ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಿವೆ. ಕಳ್ಳ ಸಾಗಾಣಿಕೆಯ ನಂತರ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಹಾಗೂ ಮಕ್ಕಳನ್ನು ಭಿಕ್ಷಾಟನೆಗೆ ತೊಡಗಿಸುವ ಸಾಧ್ಯೆ ಇದೆ. ಅದನ್ನು ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಿರಬೇಕು ಎಂದರು.

ದಿವಾಣಿ ನ್ಯಾಯಾಧೀಶ ಗಣೇಶ ಎನ್. ಮಾತನಾಡಿ, ಮಾನವ ಕಳ್ಳ ಸಾಗಣಿಕೆ ಕಂಡುಬಂದ ತಕ್ಷಣ ನಾಗರಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಆದರೆ, ನಾಗರಿಕರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಗ್ರಾ.ಪಂ. ಅಧ್ಯಕ್ಷೆ ಗೌಸಿಯಾಬಾನು ಗೌಸಲಿ ಮುಲ್ಲಾ, ನ್ಯಾಯವಾದಿಗಳಾದ ನಾರಾಯಣ ಉಪಾಧ್ಯಾ, ಎಸ್.ಜಿ. ಕುಲಕರ್ಣಿ, ಶೋಭಾ ಬಳಿಗೇರ, ಎಂ.ಜಿ. ಚೌಧರಿ, ಪಿಡಿಒ ನಾಗರಾಜ ಬಿದರಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಂಕ್ರಮ್ಮ ಭೋವಿ, ಶಿಕ್ಷಕಿ ಸುಧಾ ಲೋಂಡಿ, ಉಮಾ ನಾಗನೂರ ಇದ್ದರು.