ಜಿಲ್ಲೆ

ಅನ್ಯಾಯ ತಡೆಯುವುದು ಪ್ರವಾದಿ ಬೋಧನೆಯ ಭಾಗ

ಸಿದ್ದಾಪುರ: ಅನ್ಯಾಯ, ಹಿಂಸಾಚಾರ ಮಾಡುವವರನ್ನು ತಡೆಯುವುದು ಪ್ರವಾದಿಯವರ ಬೋಧನೆಯ ಒಂದು ಭಾಗವಾಗಿದೆ ಎಂದು ಕೊಡಗು ಜಿಲ್ಲಾ ನಾಯಿಬ್ ಖಾಝಿ ಎಂ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಎಡಪಲಾ ಹೇಳಿದರು.

ಸಿದ್ದಾಪುರದ ಮದರಸ ಆವರಣದಲ್ಲಿ ಸೋಮವಾರ ಕೊಡಗು ಜಿಲ್ಲಾ ಎಸ್‌ಕೆಎಸ್‌ಎಸ್‌ಎಫ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಕಲೋತ್ಸವದ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನ್ಯಾಯದ ವಿರುದ್ಧ ಹೋರಾಡಲು ಕಲೆ ಮತ್ತು ಸಾಹಿತ್ಯವನ್ನು ಬಳಸಿಕೊಳ್ಳಬೇಕು. ಕಲೋತ್ಸವು ಯುವ ಪ್ರತಿಭೆಗಳಿಗೆ ಒಳ್ಳೆಯ ಅವಕಾಶವಾಗಿದೆ ಎಂದು ಹೇಳಿದರು.

ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ನಡೆದ ಏಷಿಯನ್ ಪ್ಯಾರಾಪಂಜ ಕುಸ್ತಿ ಕ್ರೀಡಾಕೂಟದಲ್ಲಿ ಭಾಗವಹಿಸಿ 3ನೇ ಸ್ಥಾನ ಪಡೆದ ಮಡಿಕೇರಿ ಅರೆಕಾಡು ಗ್ರಾಮದ ಕೆ.ಎಂ ಹಸ್ಸನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕೇರಳ ರಾಜ್ಯದ ವಯನಾಡಿನ ಮುಂಡಕೈನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕೊಡಗು ಜಿಲ್ಲೆಯ ಎಸ್‌ಕೆಎಸ್‌ಎಸ್‌ಎಫ್ ಮಿಖಾಯ ಸದಸ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಶುಹೈಬ್ ಫೈಝಿ ಕೊಳಕೇರಿ ವಹಿಸಿದ್ದರು. ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಉಪಾಧ್ಯಕ್ಷ ಸೈಯದ್ ಫಕ್ರುದ್ದೀನ್ ತಂಗಳ್ ಮುಖ್ಯ ಭಾಷಣ ಮಾಡಿದರು. ರಫೀಕ್ ಬಾಖವಿ, ಆರಿಫ್ ಫೈಝಿ, ಸಿಪಿಎಂ ಬಶೀರ್ ಹಾಜಿ, ಯು.ಎಂ.ಮುಸ್ತಫಾ ಹಾಜಿ, ಅಬ್ದುಲ್ ರವೂಫ್ ಹಾಜಿ, ಅಶ್ರಫ್ ಫೈಝಿ, ರವೂಫ್ ಹುದವಿ, ತಮ್ಲೀಕ್ ದಾರಿಮಿ, ಜಮ್ಶೀರ್ ವಾಫಿ, ಸಿದ್ದೀಕ್ ಇತರರು ಇದ್ದರು.