ಹನಗೋಡು: ಅರಣ್ಯ ಇಲಾಖೆಯು ಕಾಡಂಚಿನ ನಿವಾಸಿಗಳಿಗೆ ರಕ್ಷಣೆ ಒದಗಿಸುವುದರೊಂದಿಗೆ ವನ್ಯಮೃಗಗಳು ಗ್ರಾಮದೊಳಗೆ ಪ್ರವೇಶಿಸದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹನಗೋಡು ಹೋಬಳಿಯ ನಾಗಪುರ ಪುನರ್ವಸತಿ ಕೇಂದ್ರದಲ್ಲಿ ಹುಲಿ ದಾಳಿಗೆ ಬಲಿಯಾಗಿದ್ದ ಮೃತ ಹರೀಶ ಅವರ ಮನೆಗೆ ಭೇಟಿ ನೀಡಿ ಅರಣ್ಯ ಇಲಾಖೆಯಿಂದ ಪರಿಹಾರ ಮಂಜೂರಾತಿ ಪತ್ರ ನೀಡಿ ಮಾತನಾಡಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗ್ರಾಮಗಳಿಗೆ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳು ಪ್ರತಿನಿತ್ಯ ಲಗ್ಗೆ ಇಡುತ್ತಿರುವ ಬಗ್ಗೆ ದೂರುಗಳು ಹೆಚ್ಚು ಬರುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟೆಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಹ ಆದಿವಾಸಿಗಳಿಗೆ ವಸತಿ, ಭೂಮಿ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಬೇಕು. ಅರಣ್ಯದಂಚಿನಲ್ಲಿ ಸಾಕಷ್ಟು ಭೂಮಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಬಂದಿದ್ದು, ಕೂಡಲೇ ಅಗತ್ಯಕ್ರಮ ವಹಿಸಿ ಬಡಕುಟುಂಬಗಳಿಗೆ ಹಾಗೂ ಆದಿವಾಸಿಗಳ ವಾಸಕ್ಕೆ ನಿವೇಶನ ಗುರುತಿಸಬೇಕಿದೆ ಎಂದರು.
ಹುಲಿ ಸೆರೆಗೆ ಕ್ರಮ: ಎಸಿಎಫ್ ಮಹಾದೇವಯ್ಯ ಮಾತನಾಡಿ, ಈ ಭಾಗದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಹುಲಿ ಸೆರೆ ಕಾರ್ಯಾಚರಣೆಗೆ ಸಾಕಾನೆಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಅರಣ್ಯ ಸಚಿವರ ಜತೆ ಚರ್ಚಿಸಿದ್ದು, ಎರಡು ಹುಲಿಯನ್ನು ಸೆರೆ ಹಿಡಿಯಲು ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಹುಲಿಯ ಚಲನವಲನದ ಬಗ್ಗೆ ನಿಗಾ ವಹಿಸಿ ಸೆರೆ ಹಿಡಿಯಲು ಕ್ರಮ ವಹಿಸಲಾಗುತ್ತಿದೆ. ಇದಕ್ಕೆ ಸ್ಥಳೀಯರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು. ವಲಯ ಅರಣ್ಯಾಧಿಕಾರಿ ನಂದಕುಮಾರ್, ಎಪಿಎಂಸಿ
ಮಾಜಿ ಅಧ್ಯಕ್ಷ ಮುದಗನೂರು ಸುಭಾಷ್, ಗ್ರಾ.ಪಂ. ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಜೆಡಿಎಸ್ ಮುಖಂಡರಾದ ಹೊಸೂರು ಅಣ್ಣಯ್ಯ, ಸತೀಶ್ ಪಾಪಣ್ಣ, ಹರವೆ ಶ್ರೀಧರ್ ವಿಜಿ ವಸಂತ, ಶಿವಣ್ಣ, ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.