ಹೊಳೆನರಸೀಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದರು. ರೇಣು ಕುಮಾರ್, ಸೋಮಲಿಂಗೇಗೌಡ, ಪ್ರಸನ್ನ ಕುಮಾರ್, ಶಿವಶಂಕರ್ ಇದ್ದರು. 
ಜಿಲ್ಲೆ

ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ತಡೆಯಿರಿ

ಮಾದೇಶ್ ತಿ.ನರಸೀಪುರ

ಹೊಳೆನರಸೀಪುರ: ತಾಲೂಕಿನ ಕಲ್ಲೋಡೆ ಬಾರೆ ಕಾವಲು ಹಾಗೂ ಶ್ರೀಮಠದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಬಗ್ಗೆ ಪರಿಶೀಲಿಸಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಿ ಎಂದು ಶಾಸಕ ಎಚ್.ಡಿ.ರೇವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸುರಕ್ಷಿತ ಅರಣ್ಯ ಪ್ರದೇಶ ಹಾಗೂ ಮೀಸಲು ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಲು ಬಿಡುವಂತಿಲ್ಲ ಎಂಬ ಇತ್ತೀಚಿನ ಸರ್ಕಾರದ ಆದೇಶ ಇದೆ. ಆದರೆ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ವಿಚಾರ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

ತಾಲೂಕಿನ ಕೃಷಿಕರಿಗೆ ನೆರವಾಗಬೇಕು. ಕೃಷಿಕರ ಬೆಳೆ ನಷ್ಟಕ್ಕೆ ಪರಿಹಾರ ದೊರೆಯುವಂತೆ ಸರ್ಕಾರದ ಗಮನ ಸೆಳೆಯುವಲ್ಲಿ ನನ್ನ ಪ್ರಯತ್ನ ಮಾಡುತ್ತೇನೆ. ಕೃಷಿ ಹಾಗೂ ಇತರ ಇಲಾಖೆಗಳು ರೈತರಿಗೆ ಪೂರಕವಾಗಿ ಪರಿಹಾರ ದೊರೆಯುವಂತೆ ಇಲಾಖೆಗಳಿಗೆ ಪತ್ರ ಬರೆಯುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಯಥೇಚ್ಛವಾಗಿ ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ಈ ಬೆಳೆಗೆ ಅಂಗಮಾರಿ ರೋಗಬಾಧೆಯಿಂದ ರೈತರು ಬೆಳೆಯುವುದನ್ನು ಕೈಬಿಟ್ಟಿದ್ದಾರೆ. ಮುಸುಕಿನ ಜೋಳ ಬೆಳೆಯಲು ಮುಂದಾಗಿದ್ದ ರೈತರಿಗೆ ಬಿಳಿ ಸುಳಿ ರೋಗಬಾಧೆ ಹರಡಿ ರೈತರಿಗೆ ನಷ್ಟ ಉಂಟಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೃಷಿ ವಿಜ್ಞಾನಿಗಳ ತಂಡ ಆಗಮಿಸಿ ಅಧ್ಯಯನ ನಡೆಸಿ ರೋಗ ನಿವಾರಣೆಗೆ ಮುಂದಾಗಿದ್ದಾರೆ. ರೋಗ ತಡೆಗಟ್ಟಲು ಪರ್ಯಾಯ ಬೆಳೆ ಅವಲಂಬಿಸುವಂತೆ ಸೂಚಿಸಿದ್ದಾರೆ. ಈ ಬೆಳಗಳಿಗೆ ಪರಿಹಾರ ದೊರೆಯುವಂತೆ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಪುರಸಭೆ ಹಾಗೂ ತಾಲೂಕು ಕಚೇರಿಯಲ್ಲಿ ಶಾಸಕರು ದಿನವಿಡೀ ಕುಳಿತಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಕೆಲವರು ದೂರಿದ್ದಾರೆ. ಕಚೇರಿಗೆ ನನ್ನ ವೈಯಕ್ತಿಕ ಕೆಲಸಗಳಿಗೆ ಭೇಟಿ ನೀಡುವುದಿಲ್ಲ. ಸಾರ್ವಜನಿಕರ ಕುಂದು ಕೊರತೆ ನಿವಾರಣೆಗಾಗಿಯೇ ಕಚೇರಿಯಲ್ಲಿ ಬರುತ್ತೇನೆ ಎಂದು ತಿರುಗೇಟು ನೀಡಿದರು.

ಅರ್ಜಿ ಬರೆಯುವವರು ಹೆಚ್ಚಾಗಿದ್ದಾರೆ. ಇದಕ್ಕೆಲ್ಲ ಅಧಿಕಾರಿಗಳು ಭಯಪಡುವಂತಿಲ್ಲ. ಕಾನೂನು ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಕೆಲವು ಸಾರ್ವಜನಿಕರು ಅವರಿಗೂ ತೊಂದರೆ ನೀಡುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಉತ್ತಮ ವೈದ್ಯಕೀಯ ಸೇವೆ ಮಾಡುವ ವೈದ್ಯರನ್ನು ನಾನು ಬೆಂಬಲಿಸುತ್ತೇನೆ. ಸಾರ್ವಜನಿಕರು ಅವರಿಗೆ ಸಹಕರಿಸಬೇಕು ಎಂದು ಹೇಳಿದರು.

ತಹಸೀಲ್ದಾರ್ ವೈ.ಎಂ.ರೇಣು ಕುಮಾರ್, ಬಿಇಒ ಸೋಮಲಿಂಗೇಗೌಡ, ಪುರಸಭೆ ಅಧ್ಯಕ್ಷ ಪ್ರಸನ್ನ ಕುಮಾರ್, ಟಿಎಚ್‌ಒ ರಾಜೇಶ್, ಸಹಾಯಕ ಕೃಷಿ ನಿರ್ದೇಶಕಿ ಸವಿತಾ, ಮೀನುಗಾರಿಕೆ ಇಲಾಖೆ ಅಧಿಕಾರಿ ಸುಮಾ ಇತರರು ಇದ್ದರು.