ಶಿರಸಿ: ಸಮಾಜದಲ್ಲಿ ಮಹಿಳೆಯರ ಅನುಪಾತ ಕಡಿಮೆಯಾಗುತ್ತಿದೆ. ಸ್ತ್ರೀ ಭ್ರೂಣ ಹತ್ಯೆ ತಡೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ವೈದ್ಯರು ಜಾಗರೂಕರಾಗಿರಬೇಕು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ನಗರದ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ಸುರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಲಿಂಗ ಪತ್ತೆ ಬಗ್ಗೆ ಯಾರಿಂದಲೂ ದೂರು ಬರುವುದಿಲ್ಲ. ಸಾಮಾನ್ಯವಾಗಿ ಭ್ರೂಣ ಲಿಂಗ ಪರೀಕ್ಷೆ ಮಾಡಿಸಿಕೊಳ್ಳುವವರು, ಮಾಡುವವರ ಮಧ್ಯೆ ಗೌಪ್ಯವಾಗಿ ಈ ಪ್ರಕ್ರಿಯೆ ನಡೆದುಹೋಗುತ್ತದೆ. ಹೀಗಾಗಿ, ವೈದ್ಯರ ತಂಡ ಎಚ್ಚರಿಕೆಯಿಂದ ಇರಬೇಕು. ಮೂರು ತಿಂಗಳ ಬಳಿಕ ಸ್ಕಾನಿಂಗ್ ಮಾಡಿಸಿದಾಗ ಮಗು ಗಂಡೋ ಹೆಣ್ಣೋ ಎಂಬುದು ತಿಳಿದುಬರುತ್ತದೆ. ಆ ಗರ್ಭಿಣಿ ಆರು ತಿಂಗಳಿಗೆ ಮತ್ತು 9 ತಿಂಗಳಿಗೆ ಸ್ಕಾೃನಿಂಗ್ ಮಾಡಿಸಿಕೊಂಡಿದ್ದಾಳೋ ಇಲ್ಲವೋ ಎಂಬುದನ್ನು ಗಮನಿಸಬೇಕು. ಹೆಣ್ಣು ಭ್ರೂಣ ಹತ್ಯೆ ಆಗದಂತೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಮಳೆಗಾಲಕ್ಕೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದ್ದು, ಡೆಂಘೆ ಹಾಗೂ ಚಿಕೂನ್ ಗುನ್ಯಾ ರೋಗ ಹರಡುವ ಸಾಧ್ಯತೆ ಇರುತ್ತದೆ. ಈಗಿನಿಂದಲೇ ವೈದ್ಯರ ತಂಡ ಕಾರ್ಯೋನ್ಮುಖವಾಗಬೇಕು. ಸ್ಥಳೀಯ ಆಡಳಿತದಿಂದ ಫಾಗಿಂಗ್ ಮಾಡಿಸಬೇಕು ಎಂದರು.
ಗ್ರಾಮೀಣ ಆಸ್ಪತ್ರೆಗಳು ಮತ್ತು ತಾಲೂಕು ಆಸ್ಪತ್ರೆಗಳಿಗೆ ಕಟ್ಟಡದ ಅಗತ್ಯವಿರುವ ಕಡೆ ಹಂತ ಹಂತವಾಗಿ ಹೊಸ ಕಟ್ಟಡ ನಿರ್ಮಿಸುವ ಕಾರ್ಯ ಮಾಲಿದ್ದೇವೆ. ಆದರೆ, ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದ ವೈದ್ಯರು ಮತ್ತು ಸಿಬ್ಬಂದಿ ಇರುವ ಬಗ್ಗೆ ಮೊದಲ ಆದ್ಯತೆ ನೀಡಲಿದ್ದೇವೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲೂ ಕನಿಷ್ಠ ಇಬ್ಬರು ಪ್ರಸೂತಿ ತಜ್ಞ ವೈದ್ಯರು ಇರಬೇಕು ಎಂಬುದು ನಮ್ಮ ಗುರಿ. ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಕೆಲ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆ ಹಿಂದಿದೆ. ಇಲ್ಲಿಯ ಅಧಿಕಾರಿಗಳು ಇಲಾಖೆ ಪ್ರಗತಿಯನ್ನು ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಹೋಲಿಸಿಕೊಳ್ಳದೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗೆ ಹೋಲಿಸಿಕೊಂಡು ಪ್ರಗತಿ ಸಾಧಿಸಬೇಕಿದೆ ಎಂದರು.
ಶಾಸಕ ಭೀಮಣ್ಣ ನಾಯ್ಕ, ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ, ಡಿ ಎಚ್.ಒ ಡಾ. ನೀರಜ್, ಜಿಪಂ ಸಿಇಒ ಈಶ್ವರ ಕಾಂದೂ, ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಇತರರಿದ್ದರು.
ಇದಕ್ಕೂ ಮುನ್ನ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ನೂತನವಾಗಿ ನಿರ್ಮಿಸಲಾಗುತ್ತಿರುವ ಕಟ್ಟಡ ಕಾಮಗಾರಿ, ಆಸ್ಪತ್ರೆಯ ವ್ಯವಸ್ಥೆ ಪರಿಶೀಲಿಸಿದರು.
ಶಿರಸಿ ಆಸ್ಪತ್ರೆ ಮೇಲ್ದರ್ಜೆಗೆ
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ದಿನೇಶ ಗುಂಡೂರಾವ್, ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯ ಸ್ಥಾನಮಾನಕ್ಕೇರಿಸಲು ಅಗತ್ಯ ಕ್ರಮ ಕೈಗೊಂಡು ಆಸ್ಪತ್ರೆಗೆ ಸೌಲಭ್ಯ ಒದಗಿಸಲಾಗುತ್ತದೆ. ಈ ಕುರಿತು ಸಿಎಂ ಜತೆ ಮಾತನಾಡಲಿದ್ದೇನೆ ಎಂದು ಭರವಸೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಗೆ ನೀಡಲಾಗಿದ್ದ ಜಿಲ್ಲಾಸ್ಪತ್ರೆ ಮೆಡಿಕಲ್ ಕಾಲೇಜ್ ಜೊತೆ ಸೇರ್ಪಡೆ ಆಗಿದ್ದರಿಂದ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ನಡೆಸಲು ಅವಕಾಶ ಮಾಡಿಕೊಂಡಿದ್ದೇವೆ. ಈಗಾಗಲೇ ಹಳೆದು ಸೇರಿ 350 ಹಾಸಿಗೆ ಆಸ್ಪತ್ರೆ ಆಗಲಿರುವುದರಿಂದ ಸಿಎಂ ಜತೆ ಮಾತನಾಡಿ ಜಿಲ್ಲಾ ಆಸ್ಪತ್ರೆ ಸ್ಥಾನ, ಸೌಲಭ್ಯ ಕೊಡಿಸುವುದಾಗಿ ಹೇಳಿದರು.
ಶಿರಸಿ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಜುಲೈ ಒಳಗೆ ಪೂರ್ಣವಾಗಲಿದೆ. 14 ಕೋಟಿ ರೂ. ಉಪಕರಣಗಳಿಗೆ ಪ್ರಸ್ತಾವನೆ ಇದೆ. ಅಗತ್ಯ ಇದ್ದಲ್ಲಿ ಮತ್ತಷ್ಟು ಹಣ ಮಂಜೂರು ಮಾಡಲಾಗುತ್ತದೆ ಎಂದ ಅವರು, ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ. ವೈದ್ಯರನ್ನು ಆಹ್ವಾನಿಸಿದರೂ ಯಾರೂ ಬರುತ್ತಿಲ್ಲ. ಈ ಕಾರಣದಿಂದ ತತ್ ಕ್ಷಣ ಚಿಕಿತ್ಸೆಗಾದರೂ ಆಯುಷ್ ವೈದ್ಯರ ನೇಮಕಾತಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
108 ತುರ್ತು ಅಂಬುಲೆನ್ಸ ಸೇವೆಗೆ ಸಿಬಂದಿಗಳ ಕೊರತೆ ಇದೆ. ಇದೆ ಬಗ್ಗೆ ಗಮನಕ್ಕಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಈ ವ್ಯವಸ್ಥೆ ನೋಡಿಕೊಳ್ಳುವ ಕಾರ್ಯ ಮಾಡಲಾಗುತ್ತದೆ ಎಂದರು.